ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ
ಜಮ್ಮು ಬೇಸ್ ಕ್ಯಾಂಪ್ಗೆ ಭಾರೀ ಸಂಖ್ಯೆಯಲ್ಲಿ ಭಕ್ತರ ಆಗಮನ
ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ


ಜಮ್ಮು, 01 ಜುಲೈ (ಹಿ.ಸ.):

ಆ್ಯಂಕರ್:

ವಾರ್ಷಿಕ ಅಮರನಾಥ ಯಾತ್ರೆಯು ಜುಲೈ 3ರಿಂದ ಆರಂಭವಾಗಲಿದ್ದು, ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಈಗಾಗಲೇ ಜಮ್ಮುವಿನ ತವಿ ನದಿ ತೀರದಲ್ಲಿರುವ ಬೇಸ್ ಕ್ಯಾಂಪ್‌ಗೆ ಆಗಮಿಸಿದ್ದಾರೆ. ಸ್ಥಳದಲ್ಲೇ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ತಮ್ಮ ಸರದಿಗಾಗಿ ಭಕ್ತರು ಉತ್ಸಾಹದಿಂದ ಕಾಯುತ್ತಿದ್ದಾರೆ.

ಅಮರನಾಥ ಶ್ರೈನ್ ಬೋರ್ಡ್ ಯಾತ್ರಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ವ್ಯಾಪಕ ಭದ್ರತಾ ವ್ಯವಸ್ಥೆ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದೆ. ನೋಂದಣಿ ಕೇಂದ್ರಗಳು, ವೈದ್ಯಕೀಯ ಸೇವೆಗಳು, ವಸತಿ ಹಾಗೂ ಸಾರಿಗೆ ವ್ಯವಸ್ಥೆಗಳನ್ನು ಸಮರ್ಪಕವಾಗಿ ಸಜ್ಜುಗೊಳಿಸಲಾಗಿದೆ.

ಮೊದಲ ಬಾರಿಗೆ ಅಮರನಾಥ ಯಾತ್ರೆಗೆ ತೆರಳುತ್ತಿರುವ ಭಕ್ತರೊಬ್ಬರು, ಇದು ನಮ್ಮ ಮೊದಲ ಯಾತ್ರೆ. ಹಲವು ವರ್ಷಗಳಿಂದ ಬಾಬಾ ಅಮರನಾಥರ ದರ್ಶನ ಮಾಡುವ ಕನಸು ಕಂಡಿದ್ದೆವು. ಇಂದು ಆ ಕನಸು ನನಸಾಗುತ್ತಿದೆ. ಎಷ್ಟೇ ಸಮಯ ಸಾಲಿನಲ್ಲಿ ಕಾಯಬೇಕಾದರೂ ದರ್ಶನವೇ ನಮ್ಮ ಗುರಿ ಎಂದು ಸಂತಸ ವ್ಯಕ್ತಪಡಿಸಿದರು.

ರಾಜಸ್ಥಾನದ ಬಿಕಾನೇರ್‌ನಿಂದ ಬಂದಿರುವ ಭಕ್ತ ಚಂದ್ರಶೇಖರ್ ಚಾಂಗಾನಿ ಅವರು ಅಮರನಾಥ ಶ್ರೈನ್ ಬೋರ್ಡ್ ಕೈಗೊಂಡಿರುವ ಭದ್ರತಾ ಹಾಗೂ ವ್ಯವಸ್ಥಾಪನಾ ಕ್ರಮಗಳನ್ನು ಶ್ಲಾಘಿಸಿ, ಯಾತ್ರಿಕರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವರ್ಷದ 57 ದಿನಗಳ ಅಮರನಾಥ ಯಾತ್ರೆ ಜುಲೈ 3ರಂದು ಏಕಕಾಲದಲ್ಲಿ ಎರಡು ಮಾರ್ಗಗಳ ಮೂಲಕ ಆರಂಭವಾಗಲಿದೆ. ಅನಂತನಾಗ್ ಜಿಲ್ಲೆಯ ಸಾಂಪ್ರದಾಯಿಕ 48 ಕಿಲೋಮೀಟರ್ ಉದ್ದದ ನುನ್ವಾನ್–ಪಹಲ್ಗಾಮ್ ಮಾರ್ಗ ಹಾಗೂ ಗಂದರ್‌ಬಲ್ ಜಿಲ್ಲೆಯ 14 ಕಿಲೋಮೀಟರ್ ಉದ್ದದ ಕಡಿದಾದ ಬಾಲ್ಟಾಲ್ ಮಾರ್ಗಗಳಿಂದ ಯಾತ್ರೆ ನಡೆಯಲಿದೆ.

ಈ ಪವಿತ್ರ ಯಾತ್ರೆಯು ಆಗಸ್ಟ್ 28ರಂದು ರಕ್ಷಾಬಂಧನ ಹಬ್ಬದ ದಿನ ಸಮಾಪ್ತಿಯಾಗಲಿದೆ. ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಈ ಅವಧಿಯಲ್ಲಿ ಬಾಬಾ ಬರ್ಫಾನಿಯ ದರ್ಶನ ಪಡೆಯುವ ನಿರೀಕ್ಷೆಯಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande