ಕತಾರ್ ಕರ್ನಾಟಕ ಸಂಘದಿಂದ ಪರಿಸರ ದಿನಾಚರಣೆ
ದೋಹಾ, 08 ಜೂನ್ (ಹಿ.ಸ.) : ಆ್ಯಂಕರ್ : ಪರಿಸರ ದಿನಾಚರಣೆಯ ಅಂಗವಾಗಿ ಕತಾರ್ನ ಕರ್ನಾಟಕ ಸಂಘ (ಕೆಎಸ್ಕ್ಯೂ) ವತಿಯಿಂದ ಹಳೇ ಏರ್ಪೋರ್ಟ್ ಉದ್ಯಾನದಲ್ಲಿ ಬೃಹತ್ ಗಿಡ ನೆಡುವ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕತಾರ್ನ ಪುರಸಭೆ ಸಚಿವಾಲಯದ ಸಾರ್ವಜನಿಕ ಉದ್ಯಾನವನಗಳ ಇಲಾಖೆ, ದೋಹಾ ಪುರಸಭೆ ಹಾಗೂ ಕತಾ
Environment Day


ದೋಹಾ, 08 ಜೂನ್ (ಹಿ.ಸ.) :

ಆ್ಯಂಕರ್ : ಪರಿಸರ ದಿನಾಚರಣೆಯ ಅಂಗವಾಗಿ ಕತಾರ್ನ ಕರ್ನಾಟಕ ಸಂಘ (ಕೆಎಸ್ಕ್ಯೂ) ವತಿಯಿಂದ ಹಳೇ ಏರ್ಪೋರ್ಟ್ ಉದ್ಯಾನದಲ್ಲಿ ಬೃಹತ್ ಗಿಡ ನೆಡುವ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕತಾರ್ನ ಪುರಸಭೆ ಸಚಿವಾಲಯದ ಸಾರ್ವಜನಿಕ ಉದ್ಯಾನವನಗಳ ಇಲಾಖೆ, ದೋಹಾ ಪುರಸಭೆ ಹಾಗೂ ಕತಾರ್ನ ಭಾರತೀಯ ರಾಯಭಾರ ಕಚೇರಿಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಪ್ರಕೃತಿಯನ್ನು ರಕ್ಷಿಸೋಣ, ಏಕೆಂದರೆ ಪ್ರಕೃತಿ ನಮ್ಮನ್ನು ರಕ್ಷಿಸಿದೆ’ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾದ ಈ ಹಸಿರು ಅಭಿಯಾನದಲ್ಲಿ ರಾಜತಾಂತ್ರಿಕರು, ಪುರಸಭೆ ಅಧಿಕಾರಿಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಅನಿವಾಸಿ ಭಾರತೀಯ ಸಮುದಾಯದ ನೂರಾರು ಸದಸ್ಯರು ಭಾಗವಹಿಸಿ ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕತಾರ್ನಲ್ಲಿರುವ ಭಾರತದ ರಾಯಭಾರಿಯಾದ ವಿಪುಲ್ ಹಾಗೂ ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರಿ ಸಂದೀಪ್ ಕುಮಾರ್ ಉಪಸ್ಥಿತರಿದ್ದರು. ಕತಾರ್ ಸರ್ಕಾರದ ಪರವಾಗಿ ಸಾರ್ವಜನಿಕ ಉದ್ಯಾನವನಗಳ ಇಲಾಖೆಯ ಸಹಾಯಕ ನಿರ್ದೇಶಕ ಮೊಹಮ್ಮದ್ ಅಬ್ದುಲ್ಲಾ ಮೊಹಮ್ಮದ್, ಮಾಧ್ಯಮ ವ್ಯವಹಾರಗಳ ಘಟಕದ ಮುಖ್ಯಸ್ಥ ಶೇಖ್ ಸುಹೈಮ್ ಅಲ್ ಥಾನಿ ಮತ್ತು ದೋಹಾ ಪುರಸಭೆಯ ಉದ್ಯಾನ ಹಾಗೂ ಮನರಂಜನಾ ವಿಭಾಗದ ಮುಖ್ಯಸ್ಥ ಸಲೇಮ್ ಅಲ್ ಅಹ್ವಾಲ್ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಯಭಾರಿ ವಿಪುಲ್, “ನಗರ ಪ್ರದೇಶಗಳಲ್ಲಿ ಹಸಿರನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜಾಗತಿಕ ಜವಾಬ್ದಾರಿಯಾಗಿದೆ. ಇಂತಹ ಪರಿಸರ ಸ್ನೇಹಿ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯ ನಿರ್ಮಿಸುವುದರ ಜೊತೆಗೆ ಭಾರತ ಮತ್ತು ಕತಾರ್ ನಡುವಿನ ಸ್ನೇಹ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುತ್ತವೆ” ಎಂದು ಹೇಳಿದರು.

ಸಾರ್ವಜನಿಕ ಉದ್ಯಾನವನಗಳ ಇಲಾಖೆಯ ಸಹಾಯಕ ನಿರ್ದೇಶಕ ಮೊಹಮ್ಮದ್ ಅಬ್ದುಲ್ಲಾ ಮೊಹಮ್ಮದ್ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. ಭಾರತೀಯ ಸಮುದಾಯದ ಸಕ್ರಿಯ ಭಾಗವಹಿಸುವಿಕೆಯನ್ನು ಶ್ಲಾಘಿಸಿದ ಅವರು, ಸಾರ್ವಜನಿಕ ಉದ್ಯಾನಗಳು ನಗರ ಜೀವನದ ಶ್ವಾಸಕೋಶಗಳಾಗಿದ್ದು, ಕರ್ನಾಟಕ ಸಂಘದಂತಹ ಸಂಘಟನೆಗಳ ಸಹಭಾಗಿತ್ವವು ಹಸಿರು ವಲಯ ವಿಸ್ತರಣೆಗೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ನೆರವಾಗುತ್ತದೆ ಎಂದು ಹೇಳಿದರು.

ನಂತರ ರಾಯಭಾರಿಗಳು, ಪುರಸಭೆ ಅಧಿಕಾರಿಗಳು ಹಾಗೂ ಕರ್ನಾಟಕ ಸಂಘದ ಪದಾಧಿಕಾರಿಗಳು ಗಿಡ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ವಿವಿಧ ಸಂಸ್ಥೆಗಳ ಸ್ವಯಂಸೇವಕರು ಮತ್ತು ಸಮುದಾಯದ ಸದಸ್ಯರು ಉದ್ಯಾನದ ವಿವಿಧ ಭಾಗಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.

ಕರ್ನಾಟಕ ಸಂಘದ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಅಗತ್ಯ ಸೌಲಭ್ಯಗಳು ಮತ್ತು ಸಹಕಾರ ಒದಗಿಸಿದ ಕತಾರ್ ಪುರಸಭೆ ಆಡಳಿತಕ್ಕೆ ಸಂಘದ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕತಾರ್ನ ವಿವಿಧ ಭಾರತೀಯ ಸಂಘಟನೆಗಳ ಮುಖ್ಯಸ್ಥರು ಹಾಗೂ ಕರ್ನಾಟಕ ಮೂಲದ ಸಂಘಟನೆಗಳ ನಾಯಕರು ಭಾಗವಹಿಸಿದರು. ಕರ್ನಾಟಕ ಸಂಘದ ಸಲಹೆಗಾರ ಹಾಗೂ ಐಸಿಬಿಎಫ್ ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ, ಸಲಹಾ ಸಮಿತಿ ಅಧ್ಯಕ್ಷ ರವಿ ಶೆಟ್ಟಿ ಹಾಗೂ ಸಲಹೆಗಾರ ಅರುಣ್ ಕುಮಾರ್ ಉಪಸ್ಥಿತರಿದ್ದು, ಪರಿಸರ ಸಂರಕ್ಷಣೆಯ ಈ ಮಹತ್ವದ ಕಾರ್ಯಕ್ಕೆ ಕತಾರ್ನ ಕನ್ನಡಿಗರ ಪರವಾಗಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande