
ವಿಕ್ಟೋರಿಯಾ, 29 ಜೂನ್ (ಹಿ.ಸ.) :
ಆ್ಯಂಕರ್ : ಸೀಶೆಲ್ಸ್ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಅಂಗವಾಗಿ ರಾಜಧಾನಿ ವಿಕ್ಟೋರಿಯಾದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಗೌರವ ಪಡೆದ ಮೊದಲ ಭಾರತೀಯ ಪ್ರಧಾನಿಯಾಗಿ ಅವರು ಹೊಸ ಇತಿಹಾಸ ನಿರ್ಮಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಸೀಶೆಲ್ಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಿರುವುದು ತಮ್ಮ ಪಾಲಿಗೆ ಹೆಮ್ಮೆಯ ಮತ್ತು ಗೌರವದ ವಿಷಯ ಎಂದು ಹೇಳಿದ್ದಾರೆ.
ಸೀಶೆಲ್ಸ್ನ ಸ್ವಾತಂತ್ರ್ಯದ ಸುವರ್ಣ ಮಹೋತ್ಸವವು ಕಳೆದ ಐವತ್ತು ವರ್ಷಗಳಲ್ಲಿ ಅಲ್ಲಿನ ಜನರು ಸಾಧಿಸಿರುವ ಅಭಿವೃದ್ಧಿ, ಪ್ರಗತಿ ಮತ್ತು ಸಾಧನೆಗಳಿಗೆ ಸಲ್ಲಿಸಿದ ಸೂಕ್ತ ಗೌರವವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಸೀಶೆಲ್ಸ್ನ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಭಾರತವು ಸೀಶೆಲ್ಸ್ನ ಅಭಿವೃದ್ಧಿಯ ಪಯಣದಲ್ಲಿ ವಿಶ್ವಾಸಾರ್ಹ ಸ್ನೇಹಿತ ಹಾಗೂ ನಂಬಿಗಸ್ತ ಸಹಭಾಗಿಯಾಗಿ ಸದಾ ಜೊತೆಯಲ್ಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ಹಂಚಿಕೊಂಡಿರುವ ಮೌಲ್ಯಗಳು, ಪರಸ್ಪರ ಸಹಕಾರ ಮತ್ತು ಜನರ ನಡುವಿನ ಆತ್ಮೀಯ ಬಾಂಧವ್ಯದಿಂದ ಈ ಸಂಬಂಧ ದಿನದಿಂದ ದಿನಕ್ಕೆ ಮತ್ತಷ್ಟು ಗಟ್ಟಿಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಸೀಶೆಲ್ಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮೊದಲ ಭಾರತೀಯ ಪ್ರಧಾನಿಯಾಗಿ ನರೇಂದ್ರ ಮೋದಿ ಗೌರವ ಪಡೆದಿರುವುದು ಉಭಯ ರಾಷ್ಟ್ರಗಳ ಗಾಢ ಸ್ನೇಹ ಮತ್ತು ವಿಶೇಷ ಪಾಲುದಾರಿಕೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ದಿನದ ಪರೇಡ್ನಲ್ಲಿ ಭಾರತೀಯ ನೌಕಾಪಡೆ ಮತ್ತು ಭಾರತೀಯ ಸೇನೆಯ ಮಾರ್ಚಿಂಗ್ ದಳಗಳು ಭಾಗವಹಿಸಿದವು. ಭಾರತೀಯ ನೌಕಾಪಡೆಯ ಬ್ಯಾಂಡ್ ಕೂಡ ತನ್ನ ಆಕರ್ಷಕ ಪ್ರದರ್ಶನ ನೀಡಿತು. ಇದರ ಜೊತೆಗೆ ಭಾರತೀಯ ನೌಕಾಪಡೆಯ ಐಎನ್ಎಸ್ ತರಕಶ್ ಮತ್ತು ಐಎನ್ಎಸ್ ಇಕ್ಷಕ್ ಯುದ್ಧನೌಕೆಗಳನ್ನು ವಿಕ್ಟೋರಿಯಾ ಬಂದರಿನಲ್ಲಿ ನಿಯೋಜಿಸಲಾಗಿತ್ತು. ಇದು ಭಾರತ ಮತ್ತು ಸೀಶೆಲ್ಸ್ ನಡುವಿನ ದೀರ್ಘಕಾಲದ ಸ್ನೇಹ ಹಾಗೂ ಸಾಗರ ಭದ್ರತಾ ಸಹಕಾರವನ್ನು ಪ್ರತಿಬಿಂಬಿಸಿತು.
ಈ ಐತಿಹಾಸಿಕ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಾರತದ ಪರವಾಗಿ ಸೀಶೆಲ್ಸ್ನ ಜನತೆಗೆ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿ, ಉಭಯ ರಾಷ್ಟ್ರಗಳ ಸ್ನೇಹ ಮತ್ತು ಸಹಕಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.