ಡಿಫೆನ್ಸ್ ಪ್ರೊಡಕ್ಷನ್ ಕಾಯ್ದೆ ಜಾರಿಗೊಳಿಸಿದ ಟ್ರಂಪ್
ವಾಷಿಂಗ್ಟನ್, 22 ಜೂನ್ (ಹಿ.ಸ.) : ಆ್ಯಂಕರ್ : ಅಮೆರಿಕದ ಶಸ್ತ್ರಾಸ್ತ್ರ ಮತ್ತು ಸೇನಾ ಉಪಕರಣಗಳ ದಾಸ್ತಾನು ಬಲಪಡಿಸುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ‘ಡಿಫೆನ್ಸ್ ಪ್ರೊಡಕ್ಷನ್ ಕಾಯ್ದೆ’ಯನ್ನು ಜಾರಿಗೊಳಿಸಿದ್ದಾರೆ. ಇರಾನ್ನೊಂದಿಗೆ ನಡೆದ ದೀರ್ಘಕಾಲದ
ಸಾಂಕೇತಿಕ


ವಾಷಿಂಗ್ಟನ್, 22 ಜೂನ್ (ಹಿ.ಸ.) :

ಆ್ಯಂಕರ್ : ಅಮೆರಿಕದ ಶಸ್ತ್ರಾಸ್ತ್ರ ಮತ್ತು ಸೇನಾ ಉಪಕರಣಗಳ ದಾಸ್ತಾನು ಬಲಪಡಿಸುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ‘ಡಿಫೆನ್ಸ್ ಪ್ರೊಡಕ್ಷನ್ ಕಾಯ್ದೆ’ಯನ್ನು ಜಾರಿಗೊಳಿಸಿದ್ದಾರೆ. ಇರಾನ್ನೊಂದಿಗೆ ನಡೆದ ದೀರ್ಘಕಾಲದ ಸಂಘರ್ಷ ಮತ್ತು ಜಾಗತಿಕ ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ ಅಮೆರಿಕದ ಶಸ್ತ್ರಾಸ್ತ್ರ ಸಂಗ್ರಹದಲ್ಲಿ ಕುಸಿತ ಉಂಟಾಗಿರುವ ಆತಂಕಗಳ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ.

ಜೂನ್ 11ರಂದು ಹೊರಡಿಸಲಾದ ಆದೇಶದಲ್ಲಿ ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರಿಗೆ ರಕ್ಷಣಾ ಉತ್ಪಾದನೆಗೆ ಅಡ್ಡಿಯಾಗಿರುವ ಅಂಶಗಳನ್ನು ನಿವಾರಿಸುವುದು ಹಾಗೂ ಸೇನಾ ಕೈಗಾರಿಕೆಗಳೊಂದಿಗೆ ಹೊಸ ಒಪ್ಪಂದಗಳನ್ನು ರೂಪಿಸುವಂತೆ ಸೂಚಿಸಲಾಗಿದೆ. ಡಿಫೆನ್ಸ್ ಪ್ರೊಡಕ್ಷನ್ ಕಾಯ್ದೆಯು ರಾಷ್ಟ್ರೀಯ ಭದ್ರತೆಗೆ ಅಗತ್ಯವಾದ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು ಮತ್ತು ಇತರೆ ಪ್ರಮುಖ ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಆದ್ಯತೆ ನೀಡುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡುತ್ತದೆ.

ಇದರ ನಡುವೆಯೇ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಚೀನಾ ಮತ್ತು ಪಾಕಿಸ್ತಾನ ಒತ್ತು ನೀಡಿವೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹಾಗೂ ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ನಡುವಿನ ದೂರವಾಣಿ ಮಾತುಕತೆಯಲ್ಲಿ ಅಮೆರಿಕ–ಇರಾನ್ ಸಂಬಂಧಗಳು ಮತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ಚರ್ಚೆ ನಡೆದಿದೆ.

ಚೀನಾ ವಿದೇಶಾಂಗ ಸಚಿವಾಲಯದ ಪ್ರಕಾರ, ಯುದ್ಧ ವಿರಾಮ, ಶಾಂತಿ ಮಾತುಕತೆಗಳ ಪುನರಾರಂಭ, ಸಮುದ್ರ ವ್ಯಾಪಾರ ಮಾರ್ಗಗಳ ಭದ್ರತೆ ಹಾಗೂ ವಿಶ್ವಸಂಸ್ಥೆಯ ಪಾತ್ರವನ್ನು ಬಲಪಡಿಸುವ ಅಗತ್ಯವನ್ನು ಉಭಯ ರಾಷ್ಟ್ರಗಳು ಒತ್ತಿಹೇಳಿವೆ. ಜೊತೆಗೆ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಪರಸ್ಪರ ಸಹಕಾರವನ್ನು ಮತ್ತಷ್ಟು ವೃದ್ಧಿಸುವ ಬದ್ಧತೆಯನ್ನೂ ವ್ಯಕ್ತಪಡಿಸಿವೆ.

ಇನ್ನೊಂದೆಡೆ, ದಕ್ಷಿಣ ಲೆಬನಾನ್ನಲ್ಲಿ ನಡೆದ ಇತ್ತೀಚಿನ ದಾಳಿಗಳ ಹಿನ್ನೆಲೆಯಲ್ಲಿ ಇರಾನ್, ಇಸ್ರೇಲ್ ವಿರುದ್ಧ ಕಠಿಣ ಸೇನಾ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದೆ. ಯುದ್ಧ ವಿರಾಮ ಒಪ್ಪಂದವನ್ನು ಇಸ್ರೇಲ್ ಹಲವು ಬಾರಿ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಇರಾನ್, ದಾಳಿಗಳು ಮುಂದುವರಿದರೆ ಸೂಕ್ತ ಉತ್ತರ ನೀಡುವುದಾಗಿ ತಿಳಿಸಿದೆ.

ವಿಶ್ಲೇಷಕರ ಪ್ರಕಾರ, ಕಳೆದ ಸುಮಾರು 15 ವಾರಗಳ ಸಂಘರ್ಷ ಮತ್ತು ಇತರೆ ಸೇನಾ ಕಾರ್ಯಾಚರಣೆಗಳಿಂದ ಅಮೆರಿಕದ ಕ್ಷಿಪಣಿಗಳು ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹದ ಮೇಲೆ ಒತ್ತಡ ಉಂಟಾಗಿದೆ. ಇದರ ಪರಿಣಾಮವಾಗಿ ದೇಶೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಅಗತ್ಯವಿದ್ದರೆ ಮಿತ್ರ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ಪೂರೈಕೆ ನೀತಿಯನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ.

ಅಮೆರಿಕ ಕಾಂಗ್ರೆಸ್ ಕೂಡ ಪ್ರಮುಖ ಕ್ಷಿಪಣಿ ವ್ಯವಸ್ಥೆಗಳು ಮತ್ತು ರಕ್ಷಣಾ ಉಪಕರಣಗಳ ಉತ್ಪಾದನೆಯನ್ನು ಹೆಚ್ಚಿಸಲು ಹೆಚ್ಚುವರಿ ಅನುದಾನ ಹಾಗೂ ದೀರ್ಘಾವಧಿಯ ಒಪ್ಪಂದಗಳಿಗೆ ಅನುಮೋದನೆ ನೀಡುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕ್ರಮಗಳು ಭವಿಷ್ಯದಲ್ಲಿ ಎದುರಾಗಬಹುದಾದ ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅಮೆರಿಕದ ಸೇನಾ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande