
ವಾಷಿಂಗ್ಟನ್, 21 ಜೂನ್ (ಹಿ.ಸ.) :
ಆ್ಯಂಕರ್: ಇರಾನ್ನೊಂದಿಗೆ ನಡೆಯಲಿರುವ ಮಹತ್ವದ ರಾಜತಾಂತ್ರಿಕ ಮಾತುಕತೆಗಳಿಗೆ ಯಾವುದೇ ಅಡ್ಡಿ ಉಂಟಾಗದಂತೆ ಲೆಬನಾನ್ನಲ್ಲಿ ಸೇನಾ ಕಾರ್ಯಾಚರಣೆಗಳನ್ನು ಮತ್ತಷ್ಟು ವಿಸ್ತರಿಸದಂತೆ ಅಮೆರಿಕ, ಇಸ್ರೇಲ್ಗೆ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ತುರ್ಕಿಯ ಅನಡೋಲು ಸುದ್ದಿಸಂಸ್ಥೆ ಉಲ್ಲೇಖಿಸಿರುವ ಇಸ್ರೇಲ್ನ ಚಾನೆಲ್–13 ವರದಿಯ ಪ್ರಕಾರ, ಅಮೆರಿಕ ಆಡಳಿತವು ಇಸ್ರೇಲ್ಗೆ ಕಳುಹಿಸಿದ ಸಂದೇಶದಲ್ಲಿ, ಇರಾನ್ನೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಪ್ರಕ್ರಿಯೆಗೆ ಧಕ್ಕೆಯಾಗುವಂತಹ ಯಾವುದೇ ಸೇನಾ ಕ್ರಮಗಳನ್ನು ಕೈಗೊಳ್ಳಬಾರದು ಎಂದು ತಿಳಿಸಿದೆ.
ಇರಾನ್ನೊಂದಿಗೆ ನಡೆಯುತ್ತಿರುವ ಮಾತುಕತೆಯನ್ನು ಹದಗೆಡಿಸುವ ಅಥವಾ ಸಂಪೂರ್ಣವಾಗಿ ಸ್ಥಗಿತಗೊಳಿಸುವ ಸಾಧ್ಯತೆಯಿರುವ ದಾಳಿಗಳನ್ನು ಅಮೆರಿಕದೊಂದಿಗೆ ಪೂರ್ವ ಸಮನ್ವಯವಿಲ್ಲದೆ ನಡೆಸಬಾರದು ಎಂಬುದನ್ನೂ ವಾಷಿಂಗ್ಟನ್ ಸ್ಪಷ್ಟಪಡಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ, ಇಸ್ರೇಲಿ ಸೇನೆಗೆ ಲೆಬನಾನ್ನಲ್ಲಿ ನಡೆಸುತ್ತಿರುವ ವಾಯು ಮತ್ತು ಭೂದಾಳಿಗಳ ತೀವ್ರತೆಯನ್ನು ಗಮನಾರ್ಹವಾಗಿ ಕಡಿಮೆಗೊಳಿಸಲು ಸೂಚಿಸಲಾಗಿದೆ. ಅಲ್ಲದೆ, ತನ್ನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಮಾತ್ರ ಸೈನಿಕರನ್ನು ನಿಯೋಜಿಸಿಕೊಂಡು, ತುರ್ತು ಭದ್ರತಾ ಬೆದರಿಕೆ ಎದುರಾದಾಗ ಮಾತ್ರ ಸೀಮಿತ ಸೇನಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಆದಾಗ್ಯೂ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೇನೆಗೆ, ಅಗತ್ಯವಿರುವವರೆಗೆ ಆಕ್ರಮಿತ ಪ್ರದೇಶಗಳಲ್ಲಿ ಮುಂದುವರಿಯುವಂತೆ ಹಾಗೂ ಯಾವುದೇ ದಾಳಿಗೆ ಕಠಿಣ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನೊಂದೆಡೆ, ಸ್ವಿಟ್ಜರ್ಲೆಂಡ್ ನಲ್ಲಿ ನಡೆಯಲಿರುವ ಮಾತುಕತೆಯಲ್ಲಿ ಭಾಗವಹಿಸಲು ತೆರಳುವ ಮುನ್ನ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಪರಮಾಣು ವಿಷಯ ಹಾಗೂ ಲೆಬನಾನ್ ಯುದ್ಧ ವಿರಾಮ ಕುರಿತಂತೆ ಮಹತ್ವದ ಪ್ರಗತಿ ಸಾಧಿಸುವ ವಿಶ್ವಾಸವಿದೆ. ಈ ಎರಡೂ ವಿಷಯಗಳು ಅತ್ಯಂತ ಪ್ರಮುಖವಾಗಿದ್ದು, ಹೆಚ್ಚಿನ ಗಮನ ಅಗತ್ಯವಿದೆ ಎಂದು ಅವರು ಹೇಳಿದರು.
ಲೆಬನಾನ್ನಲ್ಲಿನ ಸಂಘರ್ಷವು ರಾಜತಾಂತ್ರಿಕ ಪ್ರಯತ್ನಗಳಿಗೆ ಹಾನಿಯಾಗುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಾಂಶಗಳಲ್ಲಿ ಪರಿಸ್ಥಿತಿ ಗಂಭೀರವಾಗಿ ಕಾಣಿಸಿದರೂ, ನೆಲಮಟ್ಟದಲ್ಲಿ ಹೋರಾಟದ ತೀವ್ರತೆ ಕಡಿಮೆಯಾಗಿದೆ. ಇಸ್ರೇಲ್ ಮತ್ತು ಲೆಬನಾನ್ ಎರಡರ ಭದ್ರತೆಯನ್ನು ಖಾತ್ರಿಪಡಿಸುವ ರೀತಿಯಲ್ಲಿ ಈ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಶಾಶ್ವತ ಯುದ್ಧ ವಿರಾಮಕ್ಕಾಗಿ ದೀರ್ಘಾವಧಿಯ ಶಾಂತಿ ಅತ್ಯಗತ್ಯವಾಗಿದ್ದು, ಅದೇ ದಿಕ್ಕಿನಲ್ಲಿ ಅಮೆರಿಕ ಕಾರ್ಯನಿರ್ವಹಿಸುತ್ತಿದೆ ಎಂದು ಜೆಡಿ ವ್ಯಾನ್ಸ್ ತಿಳಿಸಿದರು.
ಅಂತಾರಾಷ್ಟ್ರೀಯ ವ್ಯವಹಾರಗಳ ವಿಶ್ಲೇಷಕರ ಅಭಿಪ್ರಾಯದಂತೆ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಇರಾನ್ನೊಂದಿಗೆ ನಡೆಯುತ್ತಿರುವ ಮಾತುಕತೆಯನ್ನು ಯಶಸ್ವಿಗೊಳಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಮತ್ತೊಂದೆಡೆ, ಇಸ್ರೇಲ್ ತನ್ನ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡುತ್ತಿರುವುದು ಸ್ಪಷ್ಟವಾಗಿದೆ.
ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ರಾಜಕೀಯ ಮತ್ತು ಭದ್ರತಾ ಬೆಳವಣಿಗೆಗಳ ನಡುವೆ, ಇರಾನ್-ಅಮೆರಿಕ ಮಾತುಕತೆ ಹಾಗೂ ಇಸ್ರೇಲ್-ಲೆಬನಾನ್ ಗಡಿಯ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಜಾಗತಿಕ ಗಮನ ಸೆಳೆಯುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.