
ನವದೆಹಲಿ, 20 ಜೂನ್ (ಹಿ.ಸ.) :
ಆ್ಯಂಕರ್ : ಅಮೆರಿಕಾ–ಇರಾನ್ ನಡುವಿನ ಒಪ್ಪಂದ (ಎಂಒಯು)ವನ್ನು ಜಗತ್ತಿನ ಅನೇಕ ರಾಷ್ಟ್ರಗಳು ಎಚ್ಚರಿಕೆಯಿಂದ ಸ್ವಾಗತಿಸಿವೆ. ಆದರೆ ಈ ಒಪ್ಪಂದಕ್ಕೆ ಹಲವು ಅಪಾಯಗಳು ಎದುರಾಗಿದ್ದು, ಅದರಲ್ಲಿ ಪ್ರಮುಖವಾದುದು ಇಸ್ರೇಲ್ನ ನಿಲುವು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಸಚಿವರಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಇಡೀ ಲೆಬನಾನ್ ಅನ್ನು ಸುಟ್ಟುಹಾಕುವ ಕುರಿತು ಮಾತನಾಡಿದ್ದಾರೆ ಎಂದು ಉಲ್ಲೇಖಿಸಿದ ಅವರು, ಈ ಬೆಳವಣಿಗೆಯ ನಡುವೆಯೂ ಭಾರತ ಸರ್ಕಾರ ಮೌನ ವಹಿಸಿದೆ ಎಂದು ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಪರವಾದ “ಅಂಧಭಕ್ತಿ” ದೇಶದ ಹಿತಾಸಕ್ತಿಗಳಿಗೆ ಹಾನಿ ಉಂಟುಮಾಡುತ್ತಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ. ದೇಶದ ಹಿತಾಸಕ್ತಿಗಿಂತ ಕೆಲವು ಖಾಸಗಿ ಕಾರ್ಪೊರೇಟ್ ಹಿತಾಸಕ್ತಿಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ಅಮೆರಿಕಾ–ಇರಾನ್ ಒಪ್ಪಂದದ ಭವಿಷ್ಯ, ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಭಾರತದ ವಿದೇಶಾಂಗ ನೀತಿಯ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.