
ಭುವನೇಶ್ವರ, 19 ಜೂನ್ (ಹಿ.ಸ.) :
ಆ್ಯಂಕರ್ : ಒಡಿಶಾ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ₹47,600 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮಯೂರ್ಭಂಜ್ ಜಿಲ್ಲೆಯ ಪಹಾಡ್ಪುರ ಗ್ರಾಮಕ್ಕೆ ಭೇಟಿ ನೀಡಲಿರುವ ಉಭಯ ನಾಯಕರು ಬುಡಕಟ್ಟು ಸಮುದಾಯಗಳ ಪವಿತ್ರ ಆರಾಧನಾ ತಾಣಗಳಲ್ಲಿ ಪೂಜೆ ಸಲ್ಲಿಸಿ, ಕೌಶಲ್ಯಾಭಿವೃದ್ಧಿ ಕೇಂದ್ರ ಮತ್ತು ಶಾಲೆಯನ್ನು ವೀಕ್ಷಿಸಲಿದ್ದಾರೆ.
ಬಳಿಕ ರಾಯರಂಗಪುರದಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಂಧನ, ರಸ್ತೆ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಹಾಗೂ ನೀರಾವರಿ ಕ್ಷೇತ್ರಗಳಿಗೆ ಸಂಬಂಧಿಸಿದ ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
600 ಮೆಗಾವ್ಯಾಟ್ ಸಾಮರ್ಥ್ಯದ ಅಪರ್ ಇಂದ್ರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಐಬಿ ಥರ್ಮಲ್ ಪವರ್ ಸ್ಟೇಷನ್ ವಿಸ್ತರಣೆ, ಕಲ್ಲಿದ್ದಲು ಅನಿಲೀಕರಣ ಯೋಜನೆ ಸೇರಿದಂತೆ ಹಲವು ಪ್ರಮುಖ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ. ಜೊತೆಗೆ ಆಸ್ಪತ್ರೆ, ಅಟಲ್ ಬಸ್ ನಿಲ್ದಾಣಗಳು, ರೈಲು ಹಾಗೂ ರಸ್ತೆ ಯೋಜನೆಗಳನ್ನೂ ರಾಷ್ಟ್ರಕ್ಕೆ ಸಮರ್ಪಿಸಲಾಗುವುದು.
ಈ ಭೇಟಿ ಒಡಿಶಾದ ಮೂಲಸೌಕರ್ಯ ಅಭಿವೃದ್ಧಿ, ಇಂಧನ ಭದ್ರತೆ ಮತ್ತು ಬುಡಕಟ್ಟು ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.