ಸಿಕಲ್ ಸೆಲ್ ಅನೀಮಿಯಾ ; ಮಧ್ಯ ಪ್ರದೇಶದ ಸಾಧನೆ ಶ್ಲಾಘನೀಯ : ರಾಷ್ಟ್ರಪತಿ ಮುರ್ಮು
ಖಂಡವಾ, 19 ಜೂನ್ (ಹಿ.ಸ.) : ಆ್ಯಂಕರ್ : ಸಿಕಲ್ ಸೆಲ್ ಅನೀಮಿಯಾ ಕುರಿತು ಜಾಗೃತಿ ಮೂಡಿಸುವುದು, ಸಮಯಕ್ಕೆ ಸರಿಯಾಗಿ ತಪಾಸಣೆ ನಡೆಸುವುದು ಹಾಗೂ ಸೂಕ್ತ ಚಿಕಿತ್ಸೆ ಒದಗಿಸುವಲ್ಲಿ ಮಧ್ಯ ಪ್ರದೇಶ ಗಮನಾರ್ಹ ಸಾಧನೆ ಮಾಡಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದರು. ನಿಗದಿತ ಅವಧಿಗೂ ಮುನ್ನವೇ 1.3
President


ಖಂಡವಾ, 19 ಜೂನ್ (ಹಿ.ಸ.) :

ಆ್ಯಂಕರ್ : ಸಿಕಲ್ ಸೆಲ್ ಅನೀಮಿಯಾ ಕುರಿತು ಜಾಗೃತಿ ಮೂಡಿಸುವುದು, ಸಮಯಕ್ಕೆ ಸರಿಯಾಗಿ ತಪಾಸಣೆ ನಡೆಸುವುದು ಹಾಗೂ ಸೂಕ್ತ ಚಿಕಿತ್ಸೆ ಒದಗಿಸುವಲ್ಲಿ ಮಧ್ಯ ಪ್ರದೇಶ ಗಮನಾರ್ಹ ಸಾಧನೆ ಮಾಡಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದರು. ನಿಗದಿತ ಅವಧಿಗೂ ಮುನ್ನವೇ 1.32 ಕೋಟಿ ಜನರ ತಪಾಸಣೆ ಪೂರ್ಣಗೊಳಿಸಿರುವುದು ರಾಜ್ಯದ ಮಹತ್ವದ ಸಾಧನೆ ಎಂದು ಅವರು ಹೇಳಿದರು.

ವಿಶ್ವ ಸಿಕಲ್ ಸೆಲ್ ದಿನದ ಅಂಗವಾಗಿ ಮಧ್ಯಪ್ರದೇಶದ ಖಂಡವಾ ಜಿಲ್ಲೆಯ ಪವಿತ್ರ ಕ್ಷೇತ್ರ ಓಂಕಾರೇಶ್ವರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ದೀಪ ಬೆಳಗಿಸಿ ಉದ್ಘಾಟಿಸಿದ ರಾಷ್ಟ್ರಪತಿಗಳು, ಸಿಕಲ್ ಸೆಲ್ ಅನೀಮಿಯಾ ಕುರಿತು ಏರ್ಪಡಿಸಿದ್ದ ಪ್ರದರ್ಶನವನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಮಂಗುಭಾಯಿ ಪಟೇಲ್ ಹಾಗೂ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಉಪಸ್ಥಿತರಿದ್ದರು.

ಸಿಕಲ್ ಸೆಲ್ ಅನೀಮಿಯಾ ಎಂಬ ಸವಾಲನ್ನು ಭಾರತ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕಳೆದ ಕೆಲವು ವರ್ಷಗಳಿಂದ ಸಮಗ್ರ ದೃಷ್ಟಿಕೋನದೊಂದಿಗೆ ಕೈಗೊಂಡಿರುವ ಕ್ರಮಗಳು ಶ್ಲಾಘನೀಯವಾಗಿವೆ ಎಂದು ರಾಷ್ಟ್ರಪತಿ ಹೇಳಿದರು.

ಮಿಷನ್ ಮಾದರಿಯಲ್ಲಿ ನಡೆದ ತಪಾಸಣಾ ಅಭಿಯಾನದ ಪರಿಣಾಮವಾಗಿ ದೇಶಾದ್ಯಂತ ಸುಮಾರು ಎರಡೂವರೆ ಲಕ್ಷ ಜನರಲ್ಲಿ ಸಿಕಲ್ ಸೆಲ್ ಕಾಯಿಲೆ ಪತ್ತೆಯಾಗಿದ್ದು, 20 ಲಕ್ಷಕ್ಕೂ ಹೆಚ್ಚು ಜನರನ್ನು ಈ ಕಾಯಿಲೆಯ ವಾಹಕರಾಗಿ ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.

ಕಳೆದ ವರ್ಷ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ನಡೆದ “ಆರೋಗ್ಯವಂತ ಮಹಿಳೆ–ಸಬಲ ಕುಟುಂಬ” ಅಭಿಯಾನದಡಿ ಮಧ್ಯ ಪ್ರದೇಶವು ನಾಲ್ಕು ಲಕ್ಷಕ್ಕೂ ಹೆಚ್ಚು ಮಹಿಳೆಯರ ಸಿಕಲ್ ಸೆಲ್ ತಪಾಸಣೆ ನಡೆಸಿ ಹೊಸ ದಾಖಲೆ ನಿರ್ಮಿಸಿದೆ. ದೇಶದ ಎಲ್ಲ ರಾಜ್ಯಗಳ ಒಗ್ಗಟ್ಟಿನ ಪ್ರಯತ್ನದಿಂದ 2047ರ ಗಡುವಿಗೂ ಮುನ್ನವೇ ಸಿಕಲ್ ಸೆಲ್ ಸಂಬಂಧಿತ ಕಾಯಿಲೆಗಳನ್ನು ನಿರ್ಮೂಲನೆ ಮಾಡುವ ರಾಷ್ಟ್ರೀಯ ಗುರಿ ಸಾಧಿಸಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

2023ರಲ್ಲಿ ಘೋಷಿಸಲಾಗಿದ್ದ ರಾಷ್ಟ್ರೀಯ ಸಿಕಲ್ ಸೆಲ್ ಮಿಷನ್ನ ಗುರಿಗಳನ್ನು ಮಧ್ಯಪ್ರದೇಶ ನಿಗದಿತ ಸಮಯಕ್ಕಿಂತ ಮುಂಚೆಯೇ ಸಾಧಿಸಿರುವುದು ಸಂತೋಷದ ಸಂಗತಿ ಎಂದು ರಾಷ್ಟ್ರಪತಿ ಹೇಳಿದರು.

ರಾಜ್ಯದಲ್ಲಿ 1.32 ಕೋಟಿಗೂ ಹೆಚ್ಚು ಜನರ ತಪಾಸಣೆ ಪೂರ್ಣಗೊಂಡಿದ್ದು, ಅವರಲ್ಲಿ ಬಹುತೇಕರಿಗೆ ಅನುವಂಶಿಕ ಸಮಾಲೋಚನಾ ಕಾರ್ಡ್ಗಳನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಸುಮಾರು ಮೂರು ವರ್ಷಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಶಹಡೋಲ್ನಲ್ಲಿ ರಾಷ್ಟ್ರೀಯ ಸಿಕಲ್ ಸೆಲ್ ಮಿಷನ್ಗೆ ಚಾಲನೆ ನೀಡಿದ್ದರು. ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಜಂಟಿ ಸಹಯೋಗದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಇಂತಹ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಂಡಿದೆ ಎಂದು ರಾಷ್ಟ್ರಪತಿ ಹೇಳಿದರು.

ಸಿಕಲ್ ಸೆಲ್ ಸಮಸ್ಯೆಯನ್ನು ಕೇವಲ ಆರೋಗ್ಯ ಸಮಸ್ಯೆಯಾಗಿ ಮಾತ್ರವಲ್ಲದೆ, ಬುಡಕಟ್ಟು ಸಮುದಾಯಗಳ ಆರೋಗ್ಯ, ಅನುವಂಶಿಕ ಜಾಗೃತಿ ಮತ್ತು ತಡೆಗಟ್ಟುವ ಆರೋಗ್ಯ ಸೇವೆಯ ಸವಾಲಾಗಿ ಪರಿಗಣಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ಬುಡಕಟ್ಟು ಆರೋಗ್ಯ ಸಂಶೋಧನಾ ಸಂಸ್ಥೆ, ಏಮ್ಸ್, ರಾಷ್ಟ್ರೀಯ ಆರೋಗ್ಯ ಮಿಷನ್ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಈ ಕ್ಷೇತ್ರದಲ್ಲಿ ಮಹತ್ವದ ಅಧ್ಯಯನ ಮತ್ತು ಸಂಶೋಧನೆ ನಡೆಸಿವೆ ಎಂದು ಅವರು ತಿಳಿಸಿದರು.

ಪ್ರದರ್ಶನದಲ್ಲಿ ಅಲೋಪತಿ ವೈದ್ಯಕೀಯದ ಜೊತೆಗೆ ಆಯುರ್ವೇದ ಕ್ಷೇತ್ರದಲ್ಲಿಯೂ ಸಂಶೋಧನೆಗಳು ನಡೆಯುತ್ತಿರುವುದನ್ನು ನೋಡಿ ಸಂತೋಷವಾಗಿದೆ ಎಂದರು.

ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಮಾತನಾಡಿ, ಓಂಕಾರೇಶ್ವರ ಮತ್ತು ನರ್ಮದಾ ತಾಯಿಯ ಪವಿತ್ರ ನೆಲದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮ್ಮುಖದಲ್ಲಿ ವಿಶ್ವ ಸಿಕಲ್ ಸೆಲ್ ದಿನಾಚರಣೆ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಹಾಗೂ ಆಗ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದ ಮಂಗುಭಾಯಿ ಪಟೇಲ್ ಅವರ ಮಾರ್ಗದರ್ಶನದಲ್ಲಿ ಈ ಅಭಿಯಾನದ ಅಡಿಪಾಯ ಹಾಕಲಾಗಿತ್ತು ಎಂದು ಅವರು ಹೇಳಿದರು. 2023ರಲ್ಲಿ ಶಹಡೋಲ್ನಿಂದ ಸಿಕಲ್ ಸೆಲ್ ನಿರ್ಮೂಲನಾ ಅಭಿಯಾನ 2.0 ಆರಂಭಗೊಂಡಿದ್ದು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 1.32 ಕೋಟಿ ಜನರ ತಪಾಸಣೆ ನಡೆಸಲಾಗಿದೆ. 2027ರೊಳಗೆ 1.60 ಕೋಟಿ ಜನರ ತಪಾಸಣೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಜ್ಯಪಾಲ ಮಂಗುಭಾಯಿ ಪಟೇಲ್ ಅವರು ಈ ಅಭಿಯಾನದ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸುತ್ತಾ, ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಮಾರ್ಗದರ್ಶನ ನೀಡಿರುವುದರಿಂದ ಯೋಜನೆ ಯಶಸ್ವಿಯಾಗಿ ಸಾಗುತ್ತಿದೆ ಎಂದು ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಿಕಲ್ ಸೆಲ್ ರೋಗಿಗಳು, ನಿಯಮಿತ ರಕ್ತದಾನಿಗಳು ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ, ಪ್ರದರ್ಶನದ ಮೂಲಕ ಸಿಕಲ್ ಸೆಲ್ ಅನೀಮಿಯಾ ಗುರುತಿಸುವಿಕೆ, ತಪಾಸಣೆ ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ಸಾರ್ವಜನಿಕರಿಗೆ ವಿವರವಾದ ಮಾಹಿತಿ ನೀಡಲಾಯಿತು.

ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನೆಗಾಗಿ ಮಧ್ಯಪ್ರದೇಶ ಕೈಗೊಂಡಿರುವ ಸಮಗ್ರ ಕ್ರಮಗಳು ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿವೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande