
ನವದೆಹಲಿ, 19 ಜೂನ್ (ಹಿ.ಸ.) :
ಆ್ಯಂಕರ್ : ಮಹಿಳೆಯರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಷ್ಟ್ರ ರಾಜಧಾನಿ ದೆಹಲಿಯ ಮೊದಲ ಮಹಿಳಾ ಪೊಲೀಸ್ ಠಾಣೆಯನ್ನು ಶುಕ್ರವಾರ ಉತ್ತರ ದೆಹಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿ ಉದ್ಘಾಟಿಸಲಾಯಿತು.
ದೆಹಲಿ ಉಪರಾಜ್ಯಪಾಲ ತರುಣ್ಜಿತ್ ಸಿಂಗ್ ಸಂಧು ಠಾಣೆಯನ್ನು ಉದ್ಘಾಟಿಸಿ ಮಾತನಾಡಿ, ಸುರಕ್ಷಿತ ಹಾಗೂ ಸಬಲ ಮಹಿಳೆಯೇ ಪ್ರಗತಿಪರ ಸಮಾಜದ ಅಡಿಪಾಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮಹಿಳಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಲಕ್ಷ್ಮಿ ಸಿಂಗ್ ಉಪಸ್ಥಿತರಿದ್ದರು.
ಉಪರಾಜ್ಯಪಾಲರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ನಾರಿ ಶಕ್ತಿಯೇ ರಾಷ್ಟ್ರ ನಿರ್ಮಾಣದ ಮೂಲಾಧಾರ” ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದಿಂದ ಪ್ರೇರಿತವಾಗಿ ಈ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಈ ಠಾಣೆ ಮಹಿಳೆಯರಿಗೆ ಯಾವುದೇ ಭಯವಿಲ್ಲದೆ ದೂರು ದಾಖಲಿಸಲು, ನ್ಯಾಯ ಪಡೆಯಲು ಹಾಗೂ ಅಗತ್ಯ ನೆರವು ಪಡೆಯಲು ಸುರಕ್ಷಿತ ಮತ್ತು ಸಹಕಾರಿಯ ವಾತಾವರಣ ಒದಗಿಸಲಿದೆ ಎಂದು ಅವರು ಹೇಳಿದರು.
ಇದೇ ವೇಳೆ ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ದೆಹಲಿ ಪೊಲೀಸರ ‘ಪಿಂಕ್ ಬೂತ್’ ಹಾಗೂ ‘ಸಶಕ್ತಿ’ ಅಭಿಯಾನಗಳ ಪ್ರಗತಿಯನ್ನು ಪರಿಶೀಲಿಸಿದ ಅವರು, ರಾಜಧಾನಿಯ ವಿವಿಧ ಭಾಗಗಳಲ್ಲಿ ಇಂತಹ ಇನ್ನಷ್ಟು ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಲು ಈ ಠಾಣೆ ನೇರ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಮಹಿಳೆಯರ ಮೇಲಿನ ಅನ್ಯಾಯ ಅಥವಾ ಅಪರಾಧ ಕಂಡುಬಂದಲ್ಲಿ ಸಾರ್ವಜನಿಕರು ಧ್ವನಿ ಎತ್ತಬೇಕು ಹಾಗೂ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಬೇಕು ಎಂದು ಉಪರಾಜ್ಯಪಾಲರು ಕರೆ ನೀಡಿದರು.
ಮಹಿಳಾ ಸ್ನೇಹಿ ಪೊಲೀಸ್ ವ್ಯವಸ್ಥೆ ಹಾಗೂ ಕಾನೂನು ಜಾರಿಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವ ದಿಕ್ಕಿನಲ್ಲಿ ಈ ಕ್ರಮ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.