
ನವದೆಹಲಿ, 19 ಜೂನ್ (ಹಿ.ಸ.) :
ಆ್ಯಂಕರ್ : ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆಗೆ ನೀಡಲಾದ ಪರಿಸರ ಅನುಮತಿ ಹಾಗೂ ಅದರ ಅನುಷ್ಠಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಚಿವರಿಗೆ ಮತ್ತೊಮ್ಮೆ ಪತ್ರ ಬರೆದಿರುವ ಜೈರಾಮ್ ರಮೇಶ್, ಜೂನ್ 13ರಂದು ಸಚಿವರು ನೀಡಿದ್ದ ಉತ್ತರವನ್ನು ನಿರಾಶಾದಾಯಕ ಹಾಗೂ ಅತೃಪ್ತಿಕರ ಎಂದು ಬಣ್ಣಿಸಿದ್ದಾರೆ. ಯೋಜನೆಗೆ ಸಂಬಂಧಿಸಿದ ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ವರದಿ ಸಮರ್ಪಕವಾಗಿಲ್ಲ ಮತ್ತು ಪರಿಸರ ಸಚಿವಾಲಯವೇ ನಿಗದಿಪಡಿಸಿರುವ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಯೋಜನೆಗೆ ಸಂಬಂಧಿಸಿದ ತಾಂತ್ರಿಕ, ಕಾನೂನು ಹಾಗೂ ವೈಜ್ಞಾನಿಕ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಿಲ್ಲ. ಬದಲಾಗಿ ಹಳೆಯ ವಾದಗಳನ್ನೇ ಪುನರಾವರ್ತಿಸಿ ಮೂಲ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಅನುಸರಣೆ ವರದಿಗಳು ಪ್ರಕಟವಾಗಿಲ್ಲ
ಪರಿಸರ ನಿಯಮಗಳ ಪ್ರಕಾರ ಯೋಜನೆಯ ಆರು ತಿಂಗಳಿಗೊಮ್ಮೆ ಸಲ್ಲಿಸಬೇಕಾದ ಅನುಸರಣೆ ವರದಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ಆದರೆ 2024ರ ಮಾರ್ಚ್ ನಂತರ ಯಾವುದೇ ವರದಿಯನ್ನು ಬಹಿರಂಗಪಡಿಸಲಾಗಿಲ್ಲ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಇದಲ್ಲದೆ, ಯೋಜನಾ ಮೇಲ್ವಿಚಾರಣಾ ಸಮಿತಿಯ ಸಭೆಗಳ ಕಾರ್ಯವಿವರಗಳನ್ನೂ ಸಭೆ ನಡೆದ ಹಲವು ತಿಂಗಳ ಬಳಿಕವೇ ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗುತ್ತಿದೆ. ಇದರಿಂದ ಯೋಜನೆಯ ಪಾರದರ್ಶಕತೆ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ಪ್ರಮುಖ ಅಧ್ಯಯನಗಳು ಇನ್ನೂ ಬಹಿರಂಗವಾಗಿಲ್ಲ
2022ರ ನವೆಂಬರ್ 11ರಂದು ನೀಡಲಾದ ಪರಿಸರ ಅನುಮತಿಯ ಷರತ್ತುಗಳ ಪ್ರಕಾರ ವಿವಿಧ ಸಂರಕ್ಷಣಾ ಹಾಗೂ ಪರಿಸರ ಹಾನಿ ತಗ್ಗಿಸುವ ಯೋಜನೆಗಳನ್ನು 15 ದಿನಗಳೊಳಗೆ ಸಲ್ಲಿಸಬೇಕಾಗಿತ್ತು. ಭಾರತೀಯ ವನ್ಯಜೀವಿ ಸಂಸ್ಥೆ, ಭಾರತೀಯ ಪ್ರಾಣಿ ಸರ್ವೇಕ್ಷಣಾ ಇಲಾಖೆ, ಭಾರತೀಯ ಸಸ್ಯ ಸರ್ವೇಕ್ಷಣಾ ಇಲಾಖೆ ಹಾಗೂ ಅಂಡಮಾನ್-ನಿಕೋಬಾರ್ ಅರಣ್ಯ ಇಲಾಖೆ ಸಿದ್ಧಪಡಿಸಿರುವ ಈ ಪ್ರಮುಖ ಯೋಜನೆಗಳನ್ನು ಇಂದಿಗೂ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಾಗುವಂತೆ ಮಾಡಿಲ್ಲ ಎಂದು ಅವರು ದೂರಿದ್ದಾರೆ.
ಪರಿಸರ ಮೌಲ್ಯಮಾಪನ ಸಮಿತಿಯ ಪರಿಶೀಲನೆಯ ಬಳಿಕ ಕೆಲವು ಸಂಸ್ಥೆಗಳಿಂದ ಪರಿಷ್ಕೃತ ಪ್ರಸ್ತಾವನೆಗಳನ್ನು ಕೇಳಲಾಗಿದೆ. ಆದರೆ ಆ ದಾಖಲೆಗಳನ್ನು ನಂತರ ಸಲ್ಲಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ. ಇದರಿಂದ ಅವುಗಳ ವಿಶ್ವಾಸಾರ್ಹತೆ ಮತ್ತು ಸಮರ್ಪಕತೆಯ ಬಗ್ಗೆ ಪ್ರಶ್ನೆಗಳು ಮೂಡುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪರಿಸರ ಅನುಮತಿ ನೀಡುವಲ್ಲಿ ಆತುರ
ಯೋಜನೆಗೆ ಸಂಬಂಧಿಸಿದ ಹಲವಾರು ಪ್ರಮುಖ ಅಧ್ಯಯನಗಳು ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೇ ಯೋಜನೆಗೆ ಪರಿಸರ ಅನುಮತಿ ನೀಡಿರುವುದು ಸರ್ಕಾರದ ಆತುರದ ನಿರ್ಧಾರವನ್ನು ತೋರಿಸುತ್ತದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಯೋಜನೆಯ ಭಾಗವಾಗಿ ಹವಳದ ಬಂಡೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೇರೆಡೆ ಸ್ಥಳಾಂತರಿಸುವ ಕ್ರಮ ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಇಂತಹ ಪರಿಹಾರ ಕ್ರಮಗಳು ಕೇವಲ ದಾಖಲೆಗಳಲ್ಲಿ ಮಾತ್ರ ಉಳಿಯುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎನ್ಜಿಟಿ ವರದಿ ಬಹಿರಂಗಪಡಿಸಲು ಒತ್ತಾಯ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೇಮಿಸಿದ್ದ ಉನ್ನತಾಧಿಕಾರ ಸಮಿತಿಯ ವರದಿಯನ್ನು ಸಾರ್ವಜನಿಕಗೊಳಿಸಬೇಕೆಂದು ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ. ಈ ವರದಿಗಳು ಅಥವಾ ಅಧ್ಯಯನಗಳನ್ನು ಬಹಿರಂಗಪಡಿಸುವುದರಿಂದ ದೇಶದ ಭದ್ರತೆ ಅಥವಾ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಆದರೆ ಸರ್ಕಾರವು ಕಾರ್ಯತಂತ್ರದ ಅಗತ್ಯ ಎಂಬ ಕಾರಣವನ್ನು ಮುಂದಿಟ್ಟು ಮಾಹಿತಿಯನ್ನು ಮರೆಮಾಚುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರದ ನಿಲುವು
ಇದಕ್ಕೂ ಮೊದಲು ಜೈರಾಮ್ ರಮೇಶ್ ಮೇ 10 ಮತ್ತು ಜೂನ್ 3ರಂದು ಸಹ ಸಚಿವ ಭೂಪೇಂದ್ರ ಯಾದವ್ ಅವರಿಗೆ ಪತ್ರ ಬರೆದು ಪ್ರಶ್ನೆಗಳನ್ನು ಎತ್ತಿದ್ದರು. ಇದಕ್ಕೆ ಉತ್ತರವಾಗಿ ಕೇಂದ್ರ ಸರ್ಕಾರ, ಯೋಜನೆಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿ ಒಂದು ಋತುವಿನದ್ದಾಗಿದ್ದರೂ, 17 ವರ್ಷಗಳ ಉಪಗ್ರಹ ದಾಖಲೆಗಳು ಹಾಗೂ ಐತಿಹಾಸಿಕ ಮಾಹಿತಿಯೊಂದಿಗೆ ಸಮಗ್ರ ಅಧ್ಯಯನ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿತ್ತು.
ಜೂನ್ 13ರಂದು ನೀಡಿದ ಉತ್ತರದಲ್ಲಿ, ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ಕಾರಣಗಳಿಂದ ಮಾಹಿತಿ ಹಕ್ಕು ಕಾಯ್ದೆಯ ನಿಯಮಗಳ ಅಡಿಯಲ್ಲಿ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ನಿಲುವನ್ನು ಪುನರುಚ್ಚರಿಸಿತ್ತು. ಜೊತೆಗೆ, ಸಮುದ್ರ ಆಮೆಗಳು ಮತ್ತು ಸ್ಥಳೀಯ ಬುಡಕಟ್ಟು ಸಮುದಾಯಗಳ ರಕ್ಷಣೆಗೆ ಕಠಿಣ ಪರಿಸರ ನಿಯಮಗಳನ್ನು ಅನುಸರಿಸಲಾಗುತ್ತಿದೆ ಎಂದು ತಿಳಿಸಿತ್ತು.
ಗ್ರೇಟ್ ನಿಕೋಬಾರ್ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಪರಿಸರ ಪರಿಣಾಮ, ಪಾರದರ್ಶಕತೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತ ವಿವಾದ ಇದೀಗ ಮತ್ತೆ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ನಡುವಿನ ವಾಗ್ವಾದಕ್ಕೆ ಹೊಸ ತಿರುವು ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.