
ಲಂಡನ್, 19 ಜೂನ್ (ಹಿ.ಸ.) :
ಆ್ಯಂಕರ್ : ಬ್ರಿಟನ್ ಮೇಕರ್ಫೀಲ್ಡ್ ಉಪಚುನಾವಣಾ ಪ್ರಚಾರದ ವೇಳೆ ಬ್ರಿಟಿಷ್ ಹಿಂದೂ ಸಮುದಾಯದ ಮಹತ್ವದ ಕೊಡುಗೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಆಂಡಿ ಬರ್ನ್ಹ್ಯಾಮ್ ಅವರಿಗೆ ‘ಹಿಂದೂಸ್ ಫಾರ್ ಲೇಬರ್’ ಸಂಘಟನೆ ಸ್ವಾಗತ ಕೋರಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಆಂಡಿ ಬರ್ನ್ಹ್ಯಾಮ್, “ಬ್ರಿಟಿಷ್ ಹಿಂದೂ ಸಮುದಾಯವು ಯುನೈಟೆಡ್ ಕಿಂಗ್ಡಮ್ಗೆ ನೀಡಿರುವ ಅಮೂಲ್ಯ ಕೊಡುಗೆಯನ್ನು ನಾನು ಗೌರವಿಸುತ್ತೇನೆ” ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ‘ಹಿಂದೂಸ್ ಫಾರ್ ಲೇಬರ್’, ಬ್ರಿಟಿಷ್ ಹಿಂದೂಗಳು ಆರೋಗ್ಯ ಸೇವೆ, ವ್ಯಾಪಾರ, ಶಿಕ್ಷಣ, ಸಾರ್ವಜನಿಕ ಸೇವೆ, ವಿಜ್ಞಾನ ಹಾಗೂ ಸ್ವಯಂಸೇವಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿ ದೇಶದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಹೇಳಿದೆ.
ಬ್ರಿಟನ್ನ ವೈವಿಧ್ಯಮಯ ಸಮುದಾಯಗಳೊಂದಿಗೆ ಸಕಾರಾತ್ಮಕವಾಗಿ ತೊಡಗಿಸಿಕೊಳ್ಳುವ ಅಗತ್ಯವನ್ನು ಆಂಡಿ ಬರ್ನ್ಹ್ಯಾಮ್ ಅರ್ಥಮಾಡಿಕೊಂಡಿದ್ದಾರೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಬ್ರಿಟಿಷ್ ಹಿಂದೂ ಸಮುದಾಯದ ಕೊಡುಗೆಯನ್ನು ಗುರುತಿಸುವ ಎಲ್ಲ ರಾಜಕೀಯ ನಾಯಕರನ್ನು ಸಂಘಟನೆ ಸ್ವಾಗತಿಸುತ್ತದೆ ಎಂದು ತಿಳಿಸಿದೆ.
ಇತ್ತೀಚೆಗೆ ನಡೆದ ಮೇಕರ್ಫೀಲ್ಡ್ ಉಪಚುನಾವಣೆಯಲ್ಲಿ ‘ಹಿಂದೂಸ್ ಫಾರ್ ಲೇಬರ್’ ಸಂಘಟನೆಯ ಸ್ವಯಂಸೇವಕರು ದೇಶದ ವಿವಿಧ ಭಾಗಗಳಿಂದ ಆಗಮಿಸಿ ಆಂಡಿ ಬರ್ನ್ಹ್ಯಾಮ್ ಅವರ ಪರ ವ್ಯಾಪಕ ಪ್ರಚಾರ ನಡೆಸಿದ್ದರು. ಮನೆಮನೆಗೆ ತೆರಳಿ ಮತಯಾಚನೆ, ಪ್ರಚಾರ ಪತ್ರ ವಿತರಣೆ, ಮತದಾರರ ಸಂಪರ್ಕ ಮತ್ತು ನಿಧಿ ಸಂಗ್ರಹಣೆಯಂತಹ ಚಟುವಟಿಕೆಗಳಲ್ಲಿ ಅವರು ಭಾಗವಹಿಸಿದ್ದರು.
ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಡಾ. ನೀರಜ್ ಪಾಟೀಲ್ ಮಾತನಾಡಿ, “ಬ್ರಿಟಿಷ್ ಹಿಂದೂ ಸಮುದಾಯವು ಯುನೈಟೆಡ್ ಕಿಂಗ್ಡಮ್ನ ಯಶಸ್ಸು ಮತ್ತು ಸಮೃದ್ಧಿಗೆ ಅಪಾರ ಕೊಡುಗೆ ನೀಡಿದೆ. ಈ ಕೊಡುಗೆಗಳನ್ನು ಆಂಡಿ ಬರ್ನ್ಹ್ಯಾಮ್ ಗುರುತಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ವೈವಿಧ್ಯತೆ, ಸಮಾನತೆ, ಒಳಗೊಳ್ಳುವಿಕೆ ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಮೌಲ್ಯೀಕರಿಸುವ ಜನಪ್ರತಿನಿಧಿಗಳೊಂದಿಗೆ ಮುಂದೆಯೂ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.
ಲೇಬರ್ ಚಳವಳಿ ಮತ್ತು ಬ್ರಿಟಿಷ್ ಹಿಂದೂ ಸಮುದಾಯದ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಸಮಾನ ಅವಕಾಶಗಳು, ಪರಸ್ಪರ ಗೌರವ ಮತ್ತು ಸಾಮಾಜಿಕ ಐಕ್ಯತೆಯನ್ನು ಉತ್ತೇಜಿಸುವ ಕಾರ್ಯದಲ್ಲಿ ಸಂಘಟನೆ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.