
ನವದೆಹಲಿ, 19 ಜೂನ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಜಿ-7 ಶೃಂಗಸಭೆ ಹಾಗೂ ಸ್ಲೋವಾಕಿಯಾ ಪ್ರವಾಸವು ಜಾಗತಿಕ ವೇದಿಕೆಯಲ್ಲಿ ಭಾರತದ ಹೆಚ್ಚುತ್ತಿರುವ ಪ್ರತಿಷ್ಠೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ತಿಳಿಸಿದೆ. ಸ್ಲೋವಾಕಿಯಾಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೋದಿ ಅವರಿಗೆ ಆ ದೇಶದ ಅತ್ಯುನ್ನತ ನಾಗರಿಕ ಗೌರವ ಲಭಿಸಿರುವುದು ಭಾರತದ ಜಾಗತಿಕ ಪ್ರಭಾವಕ್ಕೆ ಸಾಕ್ಷಿಯಾಗಿದೆ ಎಂದು ಪಕ್ಷ ಹೇಳಿದೆ.
ಶುಕ್ರವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ಸಂಸದ ಡಾ. ಸುಧಾಂಶು ತ್ರಿವೇದಿ, ಬಿಜೆಪಿ ಆಡಳಿತಾವಧಿಯಲ್ಲಿಯೇ ಭಾರತಕ್ಕೆ ಜಿ-7 ಶೃಂಗಸಭೆಯಲ್ಲಿ ವಿಶೇಷ ಆಹ್ವಾನಿತ ರಾಷ್ಟ್ರವಾಗಿ ಭಾಗವಹಿಸುವ ಅವಕಾಶ ದೊರೆಯಿತು ಎಂದು ಹೇಳಿದರು.
2003ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಮೊದಲ ಬಾರಿಗೆ ಭಾರತಕ್ಕೆ ಜಿ-7 ವೇದಿಕೆಯಲ್ಲಿ ವಿಶೇಷ ಆಹ್ವಾನ ದೊರೆತಿತ್ತು ಎಂದು ಅವರು ನೆನಪಿಸಿದರು.
ಜಿ-7 ಶೃಂಗಸಭೆಯಲ್ಲಿ ಭಾರತ ಮಹತ್ವದ ಪಾತ್ರ ವಹಿಸಿದ್ದು, ಹಲವು ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದೆ. ಅಲ್ಲದೆ, ಸಂಪರ್ಕ ಮತ್ತು ವ್ಯಾಪಾರ ವೃದ್ಧಿಗೆ ಉತ್ತೇಜನ ನೀಡುವ ಅಂತರರಾಷ್ಟ್ರೀಯ ಸಹಭಾಗಿತ್ವ ಯೋಜನೆಯೊಂದನ್ನು ಭಾರತ ಜಿ-7 ರಾಷ್ಟ್ರಗಳ ಮುಂದೆ ಪ್ರಸ್ತಾಪಿಸಿದ್ದು, ಸದಸ್ಯ ರಾಷ್ಟ್ರಗಳು ಅದರಲ್ಲಿ ಆಸಕ್ತಿ ತೋರಿವೆ ಎಂದು ತ್ರಿವೇದಿ ಹೇಳಿದರು.
ಇದು ಜಾಗತಿಕ ಮಟ್ಟದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವ ಮತ್ತು ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇದುವರೆಗೆ 33 ಅಂತರರಾಷ್ಟ್ರೀಯ ಗೌರವಗಳು ಲಭಿಸಿದ್ದು, ವಿಶ್ವ ಮಟ್ಟದಲ್ಲಿ ಅವರ ನಾಯಕತ್ವಕ್ಕೆ ದೊರೆಯುತ್ತಿರುವ ಮಾನ್ಯತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ತ್ರಿವೇದಿ ಹೇಳಿದರು.
ಮೋದಿ ಅವರ ನೇತೃತ್ವದಲ್ಲಿ ಭಾರತವು ವಿಶ್ವದ ಪ್ರಮುಖ ರಾಷ್ಟ್ರಗಳ ವಿಶ್ವಾಸವನ್ನು ನಿರಂತರವಾಗಿ ಗಳಿಸುತ್ತಿದೆ. ಜಾಗತಿಕ ರಾಜಕೀಯ, ಆರ್ಥಿಕತೆ ಮತ್ತು ರಾಜತಾಂತ್ರಿಕ ಕ್ಷೇತ್ರಗಳಲ್ಲಿ ಭಾರತದ ಪಾತ್ರ ದಿನದಿಂದ ದಿನಕ್ಕೆ ಬಲವಾಗುತ್ತಿದೆ ಎಂದು ಅವರು ಹೇಳಿದರು.
ಇದೇ ವೇಳೆ, ಫ್ರಾನ್ಸ್ ದೇಶವು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿ ವರ್ಷ 30 ಸಾವಿರ ಭಾರತೀಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ನಿರ್ಧಾರ ಕೈಗೊಂಡಿರುವುದನ್ನು ಭಾರತ–ಫ್ರಾನ್ಸ್ ನಡುವಿನ ಬಲಿಷ್ಠ ಸಂಬಂಧಗಳ ಪ್ರತೀಕ ಎಂದು ಬಿಜೆಪಿ ಬಣ್ಣಿಸಿದೆ.
ಭಾರತದ ವಿದೇಶಾಂಗ ನೀತಿ, ಜಾಗತಿಕ ಸಹಭಾಗಿತ್ವ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಪರಿಣಾಮವಾಗಿ ವಿಶ್ವ ಸಮುದಾಯದಲ್ಲಿ ಭಾರತದ ಸ್ಥಾನಮಾನ ನಿರಂತರವಾಗಿ ಏರಿಕೆಯಾಗುತ್ತಿದೆ ಎಂದು ಬಿಜೆಪಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.