ಮೂರು ವರ್ಷಗಳಲ್ಲಿ ಅಪರಾಧಿಗೆ ಶಿಕ್ಷೆ ತಲುಪಿಸುವ ವ್ಯವಸ್ಥೆ ನಿರ್ಮಾಣ ಗುರಿ : ಅಮಿತ್ ಶಾ
ಅಭಿಪ್ರಾಯಪಟ್ಟಿದ್ದಾರೆ
Amit sha


ನವದೆಹಲಿ, 19 ಜೂನ್ (ಹಿ.ಸ.) :

ಆ್ಯಂಕರ್ : ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ನೀಡಿರುವ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸುವ ಪರಿಣಾಮಕಾರಿ ವ್ಯವಸ್ಥೆಯಾಗಿ ರೂಪಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಅಪರಾಧ ನಡೆದ ಬಳಿಕ ವರ್ಷಗಳ ಕಾಲ ಅಪರಾಧಿಗೆ ಶಿಕ್ಷೆಯಾಗದಿದ್ದರೆ ಅಂತಹ ವ್ಯವಸ್ಥೆಯನ್ನು ನ್ಯಾಯಸಮ್ಮತ ಎಂದು ಕರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ 26ನೇ ಅಖಿಲ ಭಾರತ ಬೆರಳಚ್ಚು ಸಮ್ಮೇಳನ–2026ನ್ನು ಉದ್ದೇಶಿಸಿ ಮಾತನಾಡಿದ ಅವರು, 2019ರಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲು ಅಭಿಯಾನ ಆರಂಭಿಸಲಾಗಿತ್ತು ಎಂದು ಹೇಳಿದ್ದಾರೆ.

ಕಾನೂನುಗಳನ್ನು ಆಧುನಿಕ ಅಗತ್ಯಗಳಿಗೆ ಅನುಗುಣವಾಗಿ ರೂಪಿಸುವುದು, ತನಿಖಾ ಪ್ರಕ್ರಿಯೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕಡ್ಡಾಯವಾಗಿ ಅಳವಡಿಸುವುದು ಹಾಗೂ ಎಫ್ಐಆರ್ ದಾಖಲೆಯಿಂದ ಹಿಡಿದು ಅಪರಾಧಿಗೆ ಶಿಕ್ಷೆ ವಿಧಿಸುವವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಮೂರು ವರ್ಷಗಳ ಒಳಗೆ ಪೂರ್ಣಗೊಳಿಸುವುದು ಈ ಪರಿವರ್ತನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ದೇಶವು ಪ್ರಸ್ತುತ ಅಪರಾಧ ನ್ಯಾಯ ವ್ಯವಸ್ಥೆಯ ಪರಿವರ್ತನಾ ಹಂತವನ್ನು ದಾಟುತ್ತಿದೆ. ಹಿಂದೆ ಪೊಲೀಸ್ ಠಾಣೆಗಳನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕೇಂದ್ರಗಳಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಕಾಲಕ್ರಮೇಣ ಅವುಗಳ ಪಾತ್ರ ಅಪರಾಧ ನಿಯಂತ್ರಣ ಮತ್ತು ತನಿಖೆಯವರೆಗೂ ವಿಸ್ತರಿಸಿದೆ. ಈಗ ಸಂಪೂರ್ಣ ನ್ಯಾಯ ವ್ಯವಸ್ಥೆಯೇ ನಾಗರಿಕರ ಹಕ್ಕುಗಳ ರಕ್ಷಣೆಗೆ ಪರಿಣಾಮಕಾರಿ ಸಾಧನವಾಗಬೇಕಿದೆ ಎಂದು ಹೇಳಿದ್ದಾರೆ.

ಎನ್ಎಎಫ್ಐಎಸ್ ವ್ಯವಸ್ಥೆಯ ಮಹತ್ವ

ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿಸುವಿಕೆ ವ್ಯವಸ್ಥೆ (ಎನ್ಎಎಫ್ಐಎಸ್) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಮಿತ್ ಶಾ, ಇದರ ಮೂಲಕ ಅನೇಕ ಸಂಕೀರ್ಣ ಪ್ರಕರಣಗಳನ್ನು ಭೇದಿಸಲು ಸಾಧ್ಯವಾಗಿದೆ ಎಂದರು. ಆದರೆ ಈ ವ್ಯವಸ್ಥೆಯ ಸಾಮರ್ಥ್ಯದ ಕೇವಲ ಶೇ.10ರಷ್ಟು ಮಾತ್ರ ಬಳಕೆಯಾಗುತ್ತಿದೆ ಎಂದು ವಿಷಾದಿಸಿದ್ದಾರೆ

ಎನ್ಎಎಫ್ಐಎಸ್ ಕೇವಲ ಅಪರಾಧಿಗಳನ್ನು ಗುರುತಿಸುವ ಸಾಧನವಲ್ಲ. ಪ್ರತಿಯೊಂದು ಅಪರಾಧ ಸ್ಥಳದಿಂದ ಸಂಗ್ರಹವಾಗುವ ಬೆರಳಚ್ಚುಗಳನ್ನು ವ್ಯವಸ್ಥೆಗೆ ಸೇರಿಸುವ ಮೂಲಕ ದತ್ತಾಂಶವನ್ನು ಮತ್ತಷ್ಟು ಸಮೃದ್ಧಗೊಳಿಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ.

ತಂತ್ರಜ್ಞಾನ ಆಧಾರಿತ ನ್ಯಾಯ ವ್ಯವಸ್ಥೆಗೆ ಒತ್ತು

ಬೆರಳಚ್ಚು, ಡಿಎನ್ಎ, ಮುಖ ಗುರುತಿಸುವಿಕೆ ಮತ್ತು ದೂರವಾಣಿ ದಾಖಲೆಗಳಂತಹ ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಿರುವಾಗ ಅನಗತ್ಯವಾಗಿ ಹೆಚ್ಚಿನ ಸಂಖ್ಯೆಯ ಹೆಚ್ಚುವರಿ ಸಾಕ್ಷ್ಯಗಳನ್ನು ಸಂಗ್ರಹಿಸುವ ಅಗತ್ಯವಿಲ್ಲ ಎಂದು ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.

ತನಿಖೆ, ಆರೋಪಪಟ್ಟಿ ಸಲ್ಲಿಕೆ, ವಿಚಾರಣೆ ಮತ್ತು ಶಿಕ್ಷೆ ವಿಧಿಸುವವರೆಗೆ ಸಂಪೂರ್ಣ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಸಕ್ರಿಯ ಬಳಕೆಗೆ ಸಮನ್ವಯಿತ ಪ್ರಯತ್ನ ಅಗತ್ಯವಿದೆ. ಈ ಉದ್ದೇಶದಿಂದಲೇ ಹೊಸ ಅಪರಾಧ ಕಾನೂನುಗಳಲ್ಲಿ ನ್ಯಾಯಾಂಗ ಮತ್ತು ಅಭಿಯೋಜನಾ ಇಲಾಖೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಲವು ಹೊಸ ನಿಯಮಗಳನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ.

ಸಿಸಿಟಿಎನ್ಎಸ್ಗೆ ಎಲ್ಲ ಪೊಲೀಸ್ ಠಾಣೆಗಳ ಸಂಪರ್ಕ

ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಪೊಲೀಸ್ ಇಲಾಖೆಗಳ ಸಹಕಾರದಿಂದ ಅಪರಾಧ ಮತ್ತು ಅಪರಾಧಿ ಪತ್ತೆ ಜಾಲ ವ್ಯವಸ್ಥೆ (ಸಿಸಿಟಿಎನ್ಎಸ್) ಶೇ.100ರಷ್ಟು ವಿಸ್ತರಣೆಗೊಂಡಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ದೇಶದ ಎಲ್ಲ 17,840 ಪೊಲೀಸ್ ಠಾಣೆಗಳನ್ನು ಈ ಜಾಲಕ್ಕೆ ಸಂಪರ್ಕಿಸಲಾಗಿದೆ. ಹಳೆಯ ದಾಖಲೆಗಳನ್ನು ಒಳಗೊಂಡಂತೆ 37.86 ಕೋಟಿ ಎಫ್ಐಆರ್ಗಳ ಮಾಹಿತಿಯು ಈಗ ವ್ಯವಸ್ಥೆಯಲ್ಲಿ ಲಭ್ಯವಿದೆ ಎಂದು ಅವರು ಹೇಳಿದ್ದಾರೆ.

ಇ-ಕೋರ್ಟ್ ವ್ಯವಸ್ಥೆಗೆ 22 ಸಾವಿರ ನ್ಯಾಯಾಲಯಗಳು ಸಂಪರ್ಕಗೊಂಡಿದ್ದು, ಇ-ಪ್ರಿಸನ್ ವ್ಯವಸ್ಥೆಯಲ್ಲಿ 2.70 ಕೋಟಿಗೂ ಹೆಚ್ಚು ದಾಖಲೆಗಳು ಲಭ್ಯವಿವೆ. ಅಲ್ಲದೆ, ಇ-ಫೋರೆನ್ಸಿಕ್ ವ್ಯವಸ್ಥೆಯಲ್ಲಿ 34.48 ಲಕ್ಷ ಪ್ರಕರಣಗಳ ವಿಧಿವಿಜ್ಞಾನ ದತ್ತಾಂಶ ಮತ್ತು 43.16 ಲಕ್ಷ ಅಪರಾಧ ಎಚ್ಚರಿಕೆಗಳ ಮಾಹಿತಿಯೂ ಲಭ್ಯವಿದೆ ಎಂದು ವಿವರಿಸಿದ್ದಾರೆ.

ಎನ್ಸಿಆರ್ಬಿ ಪಾತ್ರ ಮಹತ್ವದ್ದು

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಹಾಗೂ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋಗಳಿಲ್ಲದೆ ದೇಶದಲ್ಲಿ ಪರಿಣಾಮಕಾರಿ ಅಪರಾಧ ನಿಯಂತ್ರಣ ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಎನ್ಸಿಆರ್ಬಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ ಅವರು, ಮುಂದಿನ ದಿನಗಳಲ್ಲಿ ಅವರ ಪಾತ್ರ ಇನ್ನಷ್ಟು ಮಹತ್ವ ಪಡೆಯಲಿದೆ ಎಂದು ತಿಳಿಸಿದರು. ಬೆರಳಚ್ಚು ಬ್ಯೂರೋ ಅಪರಾಧ ನ್ಯಾಯ ವ್ಯವಸ್ಥೆಯನ್ನು ಬಲಪಡಿಸುವ ಪ್ರಮುಖ ಸಾಧನಗಳಲ್ಲಿ ಒಂದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande