
ಪ್ಯಾರಿಸ್ (ಫ್ರಾನ್ಸ್), 18 ಜೂನ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಉದ್ವಿಗ್ನತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಮಹತ್ವದ ರಾಜತಾಂತ್ರಿಕ ಬೆಳವಣಿಗೆಯೊಂದು ನಡೆದಿದೆ. ಅಮೆರಿಕಾ ಮತ್ತು ಇರಾನ್ ನಡುವಿನ ಪ್ರಸ್ತಾವಿತ ಶಾಂತಿ ಒಪ್ಪಂದದ ಕರಡುಗೆ ಉಭಯ ರಾಷ್ಟ್ರಗಳು ಪ್ರಾಥಮಿಕ ಒಪ್ಪಿಗೆ ಸೂಚಿಸಿದ್ದು, ಹಲವು ಪ್ರಮುಖ ಅಂಶಗಳನ್ನು ಒಳಗೊಂಡ ಕರಡು ದಾಖಲೆ ಮೇಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಫ್ರಾನ್ಸ್ನ ವರ್ಸೈ ಅರಮನೆಯಲ್ಲಿ ಬುಧವಾರ ರಾತ್ರಿ ನಡೆದ ಔತಣಕೂಟದ ವೇಳೆ ಈ ಕರಡು ಒಪ್ಪಂದಕ್ಕೆ ಅಧಿಕೃತ ಸಹಿ ಮಾಡಲಾಗಿದೆ. ಶ್ವೇತಭವನ ಮತ್ತು ಫಾಕ್ಸ್ ನ್ಯೂಸ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಮಾಹಿತಿಯನ್ನು ಮೊದಲಿಗೆ ಪ್ರಕಟಿಸಿವೆ.
ಇರಾನ್ನ ಪ್ರೆಸ್ ಟಿವಿ, ಗಲ್ಫ್ ನ್ಯೂಸ್, ಅಲ್ ಜಜೀರಾ, ಸಿಎನ್ಎನ್, ಟೈಮ್ ಮತ್ತು ಸಿಬಿಎಸ್ ನ್ಯೂಸ್ ವರದಿಗಳ ಪ್ರಕಾರ, ಈ ಒಪ್ಪಂದದಲ್ಲಿ ಹೋರ್ಮುಜ್ ಜಲಸಂಧಿಯನ್ನು ತೆರೆಯುವುದು, ಆರ್ಥಿಕ ನಿರ್ಬಂಧಗಳಲ್ಲಿ ಸಡಿಲಿಕೆ, ಇರಾನ್ನ ಪರಮಾಣು ಕಾರ್ಯಕ್ರಮದ ಮೇಲಿನ ನಿಗಾ ಹಾಗೂ 60 ದಿನಗಳೊಳಗೆ ಅಂತಿಮ ಒಪ್ಪಂದದತ್ತ ಹೆಜ್ಜೆ ಇಡುವಂತಹ ಅಂಶಗಳು ಸೇರಿವೆ.
ಅಮೆರಿಕ ಈ ದಾಖಲೆವನ್ನು ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಇಸ್ಲಾಮಿಕ್ ಗಣರಾಜ್ಯ ಇರಾನ್ ನಡುವಿನ ಇಸ್ಲಾಮಾಬಾದ್ ಒಪ್ಪಂದದ ತಿಳುವಳಿಕೆ ಪತ್ರ ಎಂದು ಬಿಡುಗಡೆ ಮಾಡಿದೆ. ಹೋರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯುವುದು, ಇರಾನ್ನ ಸಂವರ್ಧಿತ ಯುರೇನಿಯಂ ಸಂಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದು ಹಾಗೂ ನಿರ್ಬಂಧಗಳಲ್ಲಿ ಹಂತ ಹಂತವಾಗಿ ಸಡಿಲಿಕೆ ನೀಡಲು ಚೌಕಟ್ಟು ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ ಅವರು ಸಹ ಕರಡು ಒಪ್ಪಂದಕ್ಕೆ ಅಂತಿಮ ರೂಪ ನೀಡಿ ಸಹಿ ಮಾಡಿರುವುದನ್ನು ದೃಢಪಡಿಸಿದ್ದಾರೆ. ಈ ವಿಷಯದಲ್ಲಿ ಒಮಾನ್ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ದೀರ್ಘಕಾಲದಿಂದ ಸಮಾಲೋಚನೆಗಳು ನಡೆಯುತ್ತಿದ್ದು, ಹೋರ್ಮುಜ್ ಜಲಸಂಧಿಯ ನಿರ್ವಹಣೆಗೆ ಸಂಬಂಧಿಸಿದ ಹೆಚ್ಚಿನ ವಿಷಯಗಳಲ್ಲಿ ಒಮ್ಮತ ಮೂಡಿದೆ ಎಂದು ಅವರು ಹೇಳಿದ್ದಾರೆ.
ಕರಡು ಒಪ್ಪಂದದ ಪ್ರಮುಖ 14 ಅಂಶಗಳು
* ಎಲ್ಲಾ ರೀತಿಯ ಸೈನಿಕ ಸಂಘರ್ಷಗಳನ್ನು ತಕ್ಷಣ ನಿಲ್ಲಿಸಲು ಉಭಯ ದೇಶಗಳು ಒಪ್ಪಿಗೆ.
* ಪರಸ್ಪರರ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಹಾಗೂ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರಲು ನಿರ್ಧಾರ.
* 60 ದಿನಗಳೊಳಗೆ ಅಂತಿಮ ಶಾಂತಿ ಒಪ್ಪಂದಕ್ಕೆ ತಲುಪುವ ಗುರಿ.
* ಅಮೆರಿಕವು ಇರಾನ್ ವಿರುದ್ಧದ ನೌಕಾ ನಿರ್ಬಂಧಗಳನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳುವುದು.
* ಹೋರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಸುರಕ್ಷಿತ ಹಾಗೂ ಮುಕ್ತ ಸಂಚಾರದ ಭರವಸೆ.
* ಇರಾನ್ ಪುನರ್ನಿರ್ಮಾಣಕ್ಕಾಗಿ 300 ಬಿಲಿಯನ್ ಡಾಲರ್ ಆರ್ಥಿಕ ಸಹಕಾರ ಯೋಜನೆ.
* ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸುವ ಮಾರ್ಗಸೂಚಿ ಸಿದ್ಧಪಡಿಸುವುದು.
* ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸದಿರಲು ಪುನರುಚ್ಚಾರಣೆ.
* ಅಂತಿಮ ಒಪ್ಪಂದದವರೆಗೆ ಪ್ರಸ್ತುತ ಪರಿಸ್ಥಿತಿಯನ್ನು ಕಾಪಾಡಿಕೊಳ್ಳುವುದು.
* ಇರಾನ್ನ ತೈಲ ರಫ್ತಿಗೆ ತಕ್ಷಣದ ನಿರ್ಬಂಧ ಸಡಿಲಿಕೆ.
* ಅಮೆರಿಕದಿಂದ ಸ್ಥಗಿತಗೊಳಿಸಲ್ಪಟ್ಟಿರುವ ಇರಾನ್ ಆಸ್ತಿಗಳು ಮತ್ತು ನಿಧಿಗಳ ಬಳಕೆಗೆ ಅವಕಾಶ.
* ಒಪ್ಪಂದ ಜಾರಿಯ ಮೇಲ್ವಿಚಾರಣೆಗೆ ವಿಶೇಷ ಕಾರ್ಯಕಾರಿ ವ್ಯವಸ್ಥೆ ಸ್ಥಾಪನೆ.
* ಅಂತಿಮ ಒಪ್ಪಂದಕ್ಕಾಗಿ ಅಧಿಕೃತ ಮಾತುಕತೆ ಆರಂಭ.
* ಅಂತಿಮ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಮೂಲಕ ಕಾನೂನುಬದ್ಧ ಮಾನ್ಯತೆ.
ಈ ಬೆಳವಣಿಗೆಯನ್ನು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆಗೆ ಮಹತ್ವದ ಹೆಜ್ಜೆಯೆಂದು ವಿಶ್ಲೇಷಿಸಲಾಗುತ್ತಿದೆ. ಹಲವು ವರ್ಷಗಳಿಂದ ವೈಮನಸ್ಸಿನಲ್ಲಿದ್ದ ಅಮೆರಿಕಾ ಮತ್ತು ಇರಾನ್ ನಡುವಿನ ಸಂಬಂಧ ಸುಧಾರಣೆಗೆ ಈ ಕರಡು ಒಪ್ಪಂದ ಹೊಸ ದಾರಿಯನ್ನು ತೆರೆದಿದೆ ಎಂದು ರಾಜತಾಂತ್ರಿಕ ವಲಯಗಳು ಅಭಿಪ್ರಾಯಪಟ್ಟಿವೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.