
ವಾಷಿಂಗ್ಟನ್, 16 ಜೂನ್ (ಹಿ.ಸ.) :
ಆ್ಯಂಕರ್ : ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಸೋಮವಾರ ಅಮೆರಿಕ ವಾಯುಪಡೆಯ ಬಿ-52 ಬಾಂಬರ್ ವಿಮಾನ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಬೆಂಕಿಗಾಹುತಿಯಾಗಿದೆ. ಈ ಭೀಕರ ವಿಮಾನ ದುರಂತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.
ಎಡ್ವರ್ಡ್ಸ್ ಏರ್ ಫೋರ್ಸ್ ಬೇಸ್ನಿಂದ ನಿಯಮಿತ ಪರೀಕ್ಷಾ ಕಾರ್ಯಾಚರಣೆಗಾಗಿ ಹೊರಟಿದ್ದ ಬಿ-52 ಸ್ಟ್ರಾಟೋಫೋರ್ಟ್ರೆಸ್ ಬಾಂಬರ್ ವಿಮಾನ ಸ್ಥಳೀಯ ಸಮಯದ ಪ್ರಕಾರ ಬೆಳಿಗ್ಗೆ ಸುಮಾರು 11.20 ಗಂಟೆಗೆ ಅಪಘಾತಕ್ಕೀಡಾಯಿತು.
ಎಬಿಸಿ ನ್ಯೂಸ್ ವರದಿ ಪ್ರಕಾರ, ವಿಮಾನ ಹಾರಾಟ ಆರಂಭಿಸಿದ ಕೆಲವೇ ಸಮಯದಲ್ಲಿ ಪತನಗೊಂಡು ಬೆಂಕಿ ಹೊತ್ತಿಕೊಂಡಿತು. ಪರಿಣಾಮ ವಿಮಾನದಲ್ಲಿದ್ದ ಎಲ್ಲ ಎಂಟು ಮಂದಿ ಮೃತಪಟ್ಟಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ 412ನೇ ಟೆಸ್ಟ್ ವಿಂಗ್ನ ಉಪ ಕಮಾಂಡರ್ ಕರ್ನಲ್ ಜೇಮ್ಸ್ ಹೇಯ್ಸ್, ಲಭ್ಯವಿರುವ ದೃಶ್ಯಾವಳಿಗಳ ಪರಿಶೀಲನೆಯ ಆಧಾರದ ಮೇಲೆ ಯಾರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ.
“ಇದು ಅತ್ಯಂತ ದುಃಖದ ಘಟನೆ. ನಾವು ಎಂಟು ಅಮೂಲ್ಯ ಅಮೆರಿಕನ್ನರನ್ನು ಕಳೆದುಕೊಂಡಿದ್ದೇವೆ,” ಎಂದು ಅವರು ಹೇಳಿದ್ದಾರೆ. ಮೃತರಲ್ಲಿ ಸಮವಸ್ತ್ರಧಾರಿ ಸೈನಿಕರು, ಸರ್ಕಾರಿ ಸಿಬ್ಬಂದಿ ಹಾಗೂ ಸರ್ಕಾರಿ ಗುತ್ತಿಗೆದಾರರು ಸೇರಿದ್ದಾರೆ. ಕುಟುಂಬ ಸದಸ್ಯರಿಗೆ ಅಧಿಕೃತ ಮಾಹಿತಿ ನೀಡಿದ 24 ಗಂಟೆಗಳ ಬಳಿಕ ಮೃತರ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ಬೋಯಿಂಗ್ ಕಂಪನಿ ಸೋಮವಾರ ಸಂಜೆ ಪ್ರಕಟಣೆ ಹೊರಡಿಸಿ, ದುರಂತದಲ್ಲಿ ಮೃತಪಟ್ಟವರಲ್ಲಿ ತನ್ನ ಇಬ್ಬರು ಉದ್ಯೋಗಿಗಳೂ ಸೇರಿದ್ದಾರೆ ಎಂದು ತಿಳಿಸಿದೆ. ಮೃತರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದು ಅಗತ್ಯ ನೆರವು ಒದಗಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.
ವಾಯುಪಡೆ ನೆಲೆಯ ಆಡಳಿತವು ತುರ್ತು ಪರಿಸ್ಥಿತಿ ನಿರ್ವಹಣಾ ತಂಡಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಸಿಬ್ಬಂದಿಯ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದೆ. ಅಪಘಾತದ ಕಾರಣ ಪತ್ತೆಹಚ್ಚಲು ಸಮಗ್ರ ತನಿಖೆ ಆರಂಭವಾಗಿದ್ದು, ಪೂರ್ಣ ವರದಿ ಸಿದ್ಧವಾಗಲು ಹಲವು ತಿಂಗಳುಗಳು ಬೇಕಾಗಬಹುದು ಎಂದು ಕರ್ನಲ್ ಹೇಯ್ಸ್ ಹೇಳಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಎಡ್ವರ್ಡ್ಸ್ ಏರ್ ಫೋರ್ಸ್ ಬೇಸ್ನ ಏರ್ಫೀಲ್ಡ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲಿಗೆ ಆಗಮಿಸಬೇಕಿದ್ದ ವಿಮಾನಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದ್ದು, ಮಂಗಳವಾರದ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ.
ಎಡ್ವರ್ಡ್ಸ್ ಏರ್ ಫೋರ್ಸ್ ಬೇಸ್ ಅಮೆರಿಕದ ಹೊಸ ಹಾಗೂ ಅಭಿವೃದ್ಧಿಯ ಹಂತದಲ್ಲಿರುವ ವಿಮಾನಗಳ ಪರೀಕ್ಷಾ ಹಾರಾಟಗಳಿಗೆ ಪ್ರಸಿದ್ಧವಾಗಿದೆ.
ಬಿ-52 ಸ್ಟ್ರಾಟೋಫೋರ್ಟ್ರೆಸ್ ದೀರ್ಘ ಶ್ರೇಣಿಯ ಬಾಂಬರ್ ವಿಮಾನವಾಗಿದ್ದು, 1950ರ ದಶಕದಿಂದ ಅಮೆರಿಕದ ವಾಯುಪಡೆಯ ಪ್ರಮುಖ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಾಂಪ್ರದಾಯಿಕ ಹಾಗೂ ಅಣ್ವಸ್ತ್ರಗಳನ್ನು ದೂರದ ಗುರಿಗಳವರೆಗೆ ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ವಿಮಾನವನ್ನು ವಿಯೆಟ್ನಾಂ ಯುದ್ಧ ಸೇರಿದಂತೆ ಹಲವು ಪ್ರಮುಖ ಸೇನಾ ಕಾರ್ಯಾಚರಣೆಗಳಲ್ಲಿ ಬಳಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.