

ದೋಹಾ, 16 ಜೂನ್ (ಹಿ.ಸ.) :
ಆ್ಯಂಕರ್ : ಕತಾರ್ನ ಪ್ರತಿಷ್ಠಿತ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಸಂಘ ಕತಾರ್ (ಕೆಎಸ್ಕ್ಯೂ) ಆಯೋಜಿಸಿದ್ದ ‘ಸಂಭ್ರಮ 2026’ ಭವ್ಯ ಸಂಗೀತ ರಸಸಂಜೆ ಕಾರ್ಯಕ್ರಮವು ಅನಿವಾಸಿ ಕನ್ನಡಿಗರಿಗೆ ಅಪೂರ್ವ ಸಂಗೀತಾನುಭವ ನೀಡಿತು. ಕನ್ನಡದ ಧ್ವನಿ... ಹೃದಯಗಳ ಸಂಭ್ರಮ ಎಂಬ ಆಶಯದೊಂದಿಗೆ ಅಲ್ ವಕ್ರಾದ ಡಿಪಿಎಸ್-ಎಂಐಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಜನಪ್ರಿಯ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರ ಗಾಯನ ಪ್ರೇಕ್ಷಕರನ್ನು ರಂಜಿಸಿತು.
ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಂಗಸಂಸ್ಥೆಯಾದ ಕರ್ನಾಟಕ ಸಂಘ ಕತಾರ್ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಹರೀಶ್ ಪಾಂಡೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಭಾವನಾ ನವೀನ್ ಸ್ವಾಗತಿಸಿ, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ ಶಶಿಧರ ಎಚ್.ಬಿ. ಸುರಕ್ಷತಾ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿಪುಲ್ ಭಾಗವಹಿಸಿದ್ದರು. ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರಿ ಸಂದೀಪ್ ಕುಮಾರ್, ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎ.ಪಿ. ಮಣಿಕಂಠನ್, ಕತಾರ್ ಆಟೋ ಮ್ಯೂಸಿಯಂನ ಉಪ ನಿರ್ದೇಶಕಿ ಫಾತಿಮಾ ಅಲ್ ಮಾದೀದ್ ಹಾಗೂ ಹಿರಿಯ ಪೆಟ್ರೋಲಿಯಂ ಎಂಜಿನಿಯರ್ ಖಾಲಿದ್ ಅಲ್ ಫಕ್ರೂ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಹೊಸದುರ್ಗ ಅತಿಥಿಗಳನ್ನು ಸ್ವಾಗತಿಸಿ, ಕತಾರ್ನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಗಾಗಿ ಸಂಘ ನಡೆಸುತ್ತಿರುವ ಚಟುವಟಿಕೆಗಳನ್ನು ವಿವರಿಸಿದರು. ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಮಾತನಾಡಿ, ಸಂಘದ ಯಶಸ್ಸಿಗೆ ಕಾರಣರಾದ ಪೋಷಕರು, ಪ್ರಾಯೋಜಕರು ಹಾಗೂ ಸ್ವಯಂಸೇವಕರನ್ನು ಅಭಿನಂದಿಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ರಾಜೇಶ್ ಕೃಷ್ಣನ್ ಅವರ ನೇರ ಗಾಯನ ಸಂಗೀತ ರಸಿಕರನ್ನು ಮಂತ್ರಮುಗ್ಧರನ್ನಾಗಿಸಿತು. ಅವರೊಂದಿಗೆ ಗಾಯಕರಾದ ಪುಷ್ಪಾ ಆರಾಧ್ಯ, ಸೀಮಾ ರಾಯ್ಕರ್ ಹಾಗೂ ಸಂತೋಷ್ ದೇವಯ್ಯ ಹಾಡುಗಳ ಮೂಲಕ ರಂಗೇರಿಸಿದರು. ಕನ್ನಡದ ಸದಾಬಹಾರ ಗೀತೆಗಳು, ಭಾವಗೀತೆಗಳು, ಯುಗಳಗೀತೆಗಳು ಹಾಗೂ ಇತ್ತೀಚಿನ ಜನಪ್ರಿಯ ಚಿತ್ರಗೀತೆಗಳ ಗಾಯನಕ್ಕೆ ಪ್ರೇಕ್ಷಕರು ಭರ್ಜರಿ ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಖ್ಯಾತ ನಿರೂಪಕ ನಟರಾಜ್ ಶೆಟ್ಟಿಕೆರೆ ಕಾರ್ಯಕ್ರಮವನ್ನು ನಿರೂಪಿಸಿ ಇಡೀ ಸಭಾಂಗಣದ ಗಮನ ಸೆಳೆದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಖಜಾಂಚಿ ಮಂಜೋತ್ ಸುರೇಶ್ ವಂದನಾರ್ಪಣೆ ಸಲ್ಲಿಸಿದರು.
ಭಾರತೀಯ ಸಾಂಸ್ಕೃತಿಕ ಕೇಂದ್ರ, ಇಂಡಿಯನ್ ಕಮ್ಯುನಿಟಿ ಬೆನೆವೊಲೆಂಟ್ ಫೋರಂ, ಇಂಡಿಯನ್ ಬಿಸಿನೆಸ್ ಅಂಡ್ ಪ್ರೊಫೆಷನಲ್ಸ್ ಕೌನ್ಸಿಲ್ ಹಾಗೂ ಇಂಡಿಯನ್ ಸ್ಪೋರ್ಟ್ಸ್ ಸೆಂಟರ್ ಸೇರಿದಂತೆ ಹಲವು ಭಾರತೀಯ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕತಾರ್ನ ವಿವಿಧ ಕನ್ನಡ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
‘ಸಂಭ್ರಮ 2026’ ಕಾರ್ಯಕ್ರಮದ ಯಶಸ್ಸು ಕರ್ನಾಟಕ ಸಂಘ ಕತಾರ್ನ 2026–2028ರ ನೂತನ ಆಡಳಿತ ಮಂಡಳಿಯ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದ್ದು, ಕತಾರ್ನ ಭಾರತೀಯ ಸಮುದಾಯದಲ್ಲಿ ಕನ್ನಡ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದೆ. ಕನ್ನಡಿಗರ ಅಭೂತಪೂರ್ವ ಸ್ಪಂದನೆಯೊಂದಿಗೆ ನಡೆದ ಈ ಸಂಗೀತ ಮಹೋತ್ಸವವು ಕತಾರ್ನಲ್ಲಿ ಕನ್ನಡ ಸಾಂಸ್ಕೃತಿಕ ಆಚರಣೆಗಳಿಗೆ ಹೊಸ ಮೈಲಿಗಲ್ಲು ನಿರ್ಮಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.