
ತೆಹ್ರಾನ್, 15 ಜೂನ್ (ಹಿ.ಸ.) :
ಆ್ಯಂಕರ್ : ಹಲವು ತಿಂಗಳುಗಳಿಂದ ಜಾಗತಿಕ ಆತಂಕಕ್ಕೆ ಕಾರಣವಾಗಿದ್ದ ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆಗೆ ಅಂತ್ಯ ಕಾಣುವ ಮಹತ್ವದ ವಿದ್ಯಮಾನ ನಡೆದಿದೆ. ಉಭಯ ರಾಷ್ಟ್ರಗಳು ಶಾಂತಿ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ್ದು, ಈ ಒಪ್ಪಂದಕ್ಕೆ ಶುಕ್ರವಾರ ಸ್ವಿಟ್ಜರ್ಲ್ಯಾಂಡ್ನಲ್ಲಿ ಅಧಿಕೃತವಾಗಿ ಸಹಿ ಹಾಕಲಾಗುವುದು ಎಂದು ತಿಳಿದು ಬಂದಿದೆ.
ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವರು ಅಮೆರಿಕಾ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ಈಗಾಗಲೇ ಜಾರಿಗೆ ಬಂದಿದೆ ಎಂದು ಘೋಷಿಸಿದ್ದಾರೆ.
ಈ ಒಪ್ಪಂದದ ಪರಿಣಾಮವಾಗಿ ಕಳೆದ ಕೆಲವು ತಿಂಗಳುಗಳಿಂದ ಸಂಘರ್ಷದ ಕೇಂದ್ರವಾಗಿದ್ದ ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಮತ್ತೆ ನಿರ್ಬಂಧವಿಲ್ಲದೆ ನಡೆಯುವ ನಿರೀಕ್ಷೆ ಮೂಡಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ನೊಂದಿಗೆ ಒಪ್ಪಂದ ಸಾಧಿಸಿರುವುದಾಗಿ ಘೋಷಿಸಿ, ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಹೇರಿದ್ದ ನೌಕಾಪಡೆಯ ನಿರ್ಬಂಧವನ್ನು ತೆರವುಗೊಳಿಸುವುದಾಗಿ ತಿಳಿಸಿದ್ದಾರೆ.
ಇರಾನ್ ಉಪ ವಿದೇಶಾಂಗ ಸಚಿವ ಕಾಜೆಮ್ ಘರೀಬಾಬಾದಿ ಅವರು ಅಂತಿಮ ಕರಡು ಒಪ್ಪಂದದ ಕುರಿತು ಎರಡೂ ರಾಷ್ಟ್ರಗಳ ನಡುವೆ ಒಮ್ಮತ ಮೂಡಿದೆ ಎಂದು ಹೇಳಿದ್ದಾರೆ.
ಇರಾನ್ ಸೇನೆಯು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಅಮೆರಿಕಾ ಮತ್ತು ಇಸ್ರೇಲ್ ಅಂತಿಮವಾಗಿ ಹಿಂಜರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದೆ.
ಈ ಒಪ್ಪಂದದಿಂದ ಲೆಬನಾನ್ ಸೇರಿದಂತೆ ವಿವಿಧ ಸಂಘರ್ಷ ಪ್ರದೇಶಗಳಲ್ಲಿ ನಡೆಯುತ್ತಿರುವ ಹೋರಾಟಗಳು ಅಂತ್ಯಗೊಳ್ಳುವ ನಿರೀಕ್ಷೆಯೂ ವ್ಯಕ್ತವಾಗಿದೆ.
ಅಮೆರಿಕ ಸಂಸತ್ತಿನ ಪ್ರತಿಪಕ್ಷ ನಾಯಕ ಹಕೀಮ್ ಜೆಫ್ರೀಸ್ ಅವರು ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿ, 2015ರಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಡಳಿತಾವಧಿಯಲ್ಲಿ ಇರಾನ್ ಅಣು ಕಾರ್ಯಕ್ರಮವನ್ನು ನಿಯಂತ್ರಿಸಲು ಮಾಡಲಾಗಿದ್ದ ಒಪ್ಪಂದವನ್ನು ಟ್ರಂಪ್ ರದ್ದುಗೊಳಿಸಿದ್ದನ್ನು ಟೀಕಿಸಿದ್ದಾರೆ. ಆ ನಿರ್ಧಾರವೇ ನಂತರದ ಉದ್ವಿಗ್ನತೆಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಇರಾನ್ನೊಂದಿಗೆ ಒಪ್ಪಂದ ಪೂರ್ಣಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು. ಜಗತ್ತಿನ ಎಲ್ಲ ಹಡಗುಗಳು ತಮ್ಮ ಯಂತ್ರಗಳನ್ನು ಆರಂಭಿಸಲಿ. ತೈಲ ಸರಬರಾಜು ಮತ್ತೆ ಆರಂಭವಾಗಲಿ” ಎಂದು ಬರೆದುಕೊಂಡಿದ್ದಾರೆ.
ಈ ಶಾಂತಿ ಒಪ್ಪಂದವನ್ನು ಕತಾರ್, ಟರ್ಕಿ, ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳು ಸ್ವಾಗತಿಸಿವೆ. ಕತಾರ್ ಪ್ರಧಾನಮಂತ್ರಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಬಿನ್ ಜಾಸಿಂ ಅಲ್ ಥಾನಿ ಅವರು ಈ ಒಪ್ಪಂದವು ಭವಿಷ್ಯದ ಮಾತುಕತೆಗಳಿಗೆ ಸಕಾರಾತ್ಮಕ ವಾತಾವರಣ ನಿರ್ಮಿಸಲಿದೆ ಎಂದು ಹೇಳಿದ್ದಾರೆ.
ಟರ್ಕಿಯ ಅಧ್ಯಕ್ಷ ರೆಜೆಪ್ ತಯ್ಯಿಪ್ ಎರ್ಡೊಗನ್ ಅವರು, “ಜಗತ್ತು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ಮತ್ತು ಭದ್ರತೆಗೆ ದಾರಿ ಮಾಡಿಕೊಡಲಿದೆ” ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಈ ಒಪ್ಪಂದವನ್ನು ಯುದ್ಧ ಅಂತ್ಯಗೊಳಿಸುವ ಹಾಗೂ ಪ್ರಾದೇಶಿಕ ಸ್ಥಿರತೆಯನ್ನು ಖಚಿತಪಡಿಸುವ ಅತ್ಯಂತ ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಜರ್ಮನಿ ಚಾನ್ಸಲರ್ ಫ್ರಿಡ್ರಿಕ್ ಮರ್ಝ್ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಕೂಡ ಒಪ್ಪಂದದ ಅನುಷ್ಠಾನ ಯಶಸ್ವಿಯಾಗಲಿ ಎಂದು ಆಶಿಸಿದ್ದಾರೆ.
ಶುಕ್ರವಾರ ಸ್ವಿಟ್ಜರ್ಲ್ಯಾಂಡ್ನಲ್ಲಿ ನಡೆಯಲಿರುವ ಅಧಿಕೃತ ಸಹಿ ಸಮಾರಂಭಕ್ಕೂ ಮುನ್ನ ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ ಮತ್ತು ಟರ್ಕಿಯ ಮಧ್ಯಸ್ಥಿಕೆಯಲ್ಲಿ ಹಲವು ತಾಂತ್ರಿಕ ಸಭೆಗಳು ನಡೆಯಲಿವೆ. ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದ ಸಂಘರ್ಷಕ್ಕೆ ತೆರೆಬೀಳುವ ಮತ್ತು ಶಾಶ್ವತ ಶಾಂತಿಯ ಹೊಸ ಅಧ್ಯಾಯ ಆರಂಭವಾಗುವ ಸಾಧ್ಯತೆ ಈ ವಿದ್ಯಮಾನದಿಂದ ಮೂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.