ಫ್ರಾನ್ಸನಲ್ಲಿ ಪ್ರಧಾನಿ ಮೋದಿ–ಮ್ಯಾಕ್ರೋನ್ ಮಾತುಕತೆ
ನೀಸ್ (ಫ್ರಾನ್ಸ್), 14 ಜೂನ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಪ್ರವಾಸದ ಮೊದಲ ಹಂತವಾಗಿ ನೀಸ್ ನಗರಕ್ಕೆ ಆಗಮಿಸಿದ್ದು, ಇಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಉಭಯ ನಾಯಕರು ಜಂಟಿಯಾ
Pm


Pm


ನೀಸ್ (ಫ್ರಾನ್ಸ್), 14 ಜೂನ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಪ್ರವಾಸದ ಮೊದಲ ಹಂತವಾಗಿ ನೀಸ್ ನಗರಕ್ಕೆ ಆಗಮಿಸಿದ್ದು, ಇಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಉಭಯ ನಾಯಕರು ಜಂಟಿಯಾಗಿ ‘ಭಾರತ್ ಇನ್ನೋವೇಟ್ಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಕೇಂದ್ರ ಸರ್ಕಾರದ ನೆರವಿನಿಂದ ಕಾರ್ಯನಿರ್ವಹಿಸುತ್ತಿರುವ ತಾಂತ್ರಿಕ ಸಂಸ್ಥೆಗಳಿಂದ ಹೊರಹೊಮ್ಮುತ್ತಿರುವ ಅತ್ಯುತ್ತಮ ತಂತ್ರಜ್ಞಾನ ಆಧಾರಿತ ಉದ್ಯಮಗಳನ್ನು ಗುರುತಿಸಿ, ಮಾರ್ಗದರ್ಶನ ನೀಡಿ ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ‘ಭಾರತ್ ಇನ್ನೋವೇಟ್ಸ್’ ಕಾರ್ಯಕ್ರಮ ರೂಪಿಸಲಾಗಿದೆ. ಆಯ್ಕೆಯಾದ ನವೋದ್ಯಮ ಸಂಸ್ಥೆಗಳಿಗೆ ಹೂಡಿಕೆದಾರರು, ಕೈಗಾರಿಕಾ ಕ್ಷೇತ್ರದ ಮುಂಚೂಣಿ ನಾಯಕರು, ನೀತಿ ರೂಪಿಸುವವರು, ಸಂಶೋಧನಾ ಸಂಸ್ಥೆಗಳು ಹಾಗೂ ತಂತ್ರಜ್ಞಾನ ಪಾಲುದಾರರ ಜಾಗತಿಕ ಜಾಲದೊಂದಿಗೆ ಸಂಪರ್ಕ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರೋನ್ ನಡುವಿನ ಸಭೆಯಲ್ಲಿ ಭಾರತ–ಫ್ರಾನ್ಸ್ ಸಂಬಂಧಗಳ ವಿವಿಧ ಆಯಾಮಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ. ಈ ವರ್ಷ ಉಭಯ ರಾಷ್ಟ್ರಗಳ ಸಂಬಂಧವನ್ನು “ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ” ಮಟ್ಟಕ್ಕೆ ಏರಿಸಲಾಗಿದ್ದು, ಅದರ ಮುಂದುವರಿದ ಭಾಗವಾಗಿ ಈ ಭೇಟಿಗೆ ವಿಶೇಷ ಮಹತ್ವ ಲಭಿಸಿದೆ.

‘ಭಾರತ್ ಇನ್ನೋವೇಟ್ಸ್’ ಕಾರ್ಯಕ್ರಮದಲ್ಲಿ ಭಾರತ, ಫ್ರಾನ್ಸ್ ಹಾಗೂ ಇತರ ರಾಷ್ಟ್ರಗಳ ಪ್ರಮುಖ ನವೋದ್ಯಮ ಸಂಸ್ಥೆಗಳು ಮತ್ತು ಹೂಡಿಕೆ ನಿಧಿಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಭಾರತ–ಫ್ರಾನ್ಸ್ ನವೋದ್ಯಮ ವರ್ಷದ ಅಂಗವಾಗಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ಎರಡೂ ರಾಷ್ಟ್ರಗಳ ನಡುವಿನ ತಂತ್ರಜ್ಞಾನ ಮತ್ತು ನವೋದ್ಯಮ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

ಸ್ಲೋವಾಕಿಯಾ ಪ್ರವಾಸಕ್ಕೂ ಚಾಲನೆ

ಫ್ರಾನ್ಸ್ ಪ್ರವಾಸದ ಬಳಿಕ ಪ್ರಧಾನಿ ಮೋದಿ ಅವರು ಜೂನ್ 14ರಿಂದ 16ರವರೆಗೆ ಸ್ಲೋವಾಕಿಯಾ ದೇಶಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಅವರ ಆಹ್ವಾನದ ಮೇರೆಗೆ ನಡೆಯುತ್ತಿರುವ ಈ ಭೇಟಿ, 1993ರಲ್ಲಿ ಸ್ಲೋವಾಕಿಯಾ ಸ್ವಾತಂತ್ರ್ಯ ಪಡೆದ ನಂತರ ಭಾರತೀಯ ಪ್ರಧಾನಿಯೊಬ್ಬರು ಕೈಗೊಳ್ಳುತ್ತಿರುವ ಮೊದಲ ಅಧಿಕೃತ ಭೇಟಿಯಾಗಿದೆ.

ಈ ವೇಳೆ ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ, ಹೂಡಿಕೆ, ವಾಹನ ಉತ್ಪಾದನೆ, ರೈಲ್ವೆ ತಯಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆ ಕುರಿತು ಚರ್ಚೆ ನಡೆಯಲಿದೆ. ಪ್ರಧಾನಿ ಮೋದಿ ಅವರು ಸ್ಲೋವಾಕಿಯಾ ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನಿ ಅವರನ್ನು ಕೂಡ ಭೇಟಿ ಮಾಡಲಿದ್ದಾರೆ.

ಜಿ-7 ಶೃಂಗಸಭೆಯಲ್ಲಿ ಭಾಗವಹಿಸುವ ಮೋದಿ

ಪ್ರವಾಸದ ಮೂರನೇ ಹಂತದಲ್ಲಿ ಪ್ರಧಾನಿ ಮೋದಿ ಅವರು ಜೂನ್ 16 ಮತ್ತು 17ರಂದು ಫ್ರಾನ್ಸ್ನ ಎವಿಯನ್ ನಗರದಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಜಿ-7 ರಾಷ್ಟ್ರಗಳ ನಾಯಕರು, ಆಹ್ವಾನಿತ ಪಾಲುದಾರ ರಾಷ್ಟ್ರಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಜಾಗತಿಕ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಶೃಂಗಸಭೆಯ ಹೊರತಾಗಿಯೂ ಹಲವು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ.

ಪ್ಯಾರಿಸ್ನಲ್ಲಿ ತಂತ್ರಜ್ಞಾನ ಸಮಾವೇಶ

ಪ್ರವಾಸದ ಅಂತಿಮ ಹಂತದಲ್ಲಿ ಪ್ರಧಾನಿ ಮೋದಿ ಅವರು ಜೂನ್ 18ರಂದು ಪ್ಯಾರಿಸ್ಗೆ ಭೇಟಿ ನೀಡಿ ಮುಂದಿನ ದ್ವಿಪಕ್ಷೀಯ ಮಾತುಕತೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಯುರೋಪಿನ ಅತಿದೊಡ್ಡ ತಂತ್ರಜ್ಞಾನ ಮತ್ತು ನವೋದ್ಯಮ ಸಮಾವೇಶಗಳಲ್ಲಿ ಒಂದಾದ ‘ವಿವಾಟೆಕ್’ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ಯಾರಿಸ್ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆಯೂ ಇದೆ.

12 ಮಹತ್ವದ ಒಪ್ಪಂದಗಳ ಸಾಧ್ಯತೆ

ಭಾರತ ಮತ್ತು ಫ್ರಾನ್ಸ್ ನಡುವಿನ ತಂತ್ರಜ್ಞಾನ, ಆರೋಗ್ಯ ತಂತ್ರಜ್ಞಾನ, ವೈದ್ಯಕೀಯ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ ಸುಮಾರು 12 ಪ್ರಮುಖ ಒಪ್ಪಂದಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.

ಇದೇ ವೇಳೆ 114 ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದದ ಕುರಿತೂ ಮಹತ್ವದ ಮಾತುಕತೆ ನಡೆಯಬಹುದು. ಈ ವಿಮಾನಗಳಲ್ಲಿ ಭಾರತೀಯ ಶಸ್ತ್ರಾಸ್ತ್ರಗಳನ್ನು ಅಳವಡಿಸುವ ಅವಕಾಶ ಹಾಗೂ ಅದರ ತಾಂತ್ರಿಕ ಅಂಶಗಳ ಬಗ್ಗೆ ಭಾರತ ತನ್ನ ನಿಲುವನ್ನು ಮಂಡಿಸುವ ಸಾಧ್ಯತೆಯಿದೆ.

‘ಭಾರತ್ ಇನ್ನೋವೇಟ್ಸ್’ ಕಾರ್ಯಕ್ರಮದ ಕುರಿತು ಮಾತನಾಡಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್, “ಭಾರತ ಹೊಸ ಆವಿಷ್ಕಾರ ಮಾಡುತ್ತದೆಯೇ ಎಂಬುದು ಈಗ ಪ್ರಶ್ನೆಯಲ್ಲ; ಭಾರತದೊಂದಿಗೆ ಯಾರು ಹೊಸ ಆವಿಷ್ಕಾರ ಮಾಡುತ್ತಾರೆ ಎಂಬುದೇ ಮುಖ್ಯ ಪ್ರಶ್ನೆಯಾಗಿದೆ” ಎಂದು ಹೇಳಿದ್ದಾರೆ.

ನೀಸ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ಫ್ರಾನ್ಸ್ ಸರ್ಕಾರದ ಸಚಿವರು, ಭಾರತದಲ್ಲಿನ ಫ್ರಾನ್ಸ್ ರಾಯಭಾರಿ ಹಾಗೂ ಇತರ ಗಣ್ಯರು ಆತ್ಮೀಯ ಸ್ವಾಗತ ಕೋರಿದರು.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ನೀಸ್ಗೆ ಆಗಮಿಸಿದ್ದೇನೆ. ಈ ಪ್ರವಾಸದ ವೇಳೆ ನೀಸ್, ಎವಿಯನ್ ಮತ್ತು ಪ್ಯಾರಿಸ್ ನಗರಗಳಲ್ಲಿ ವಿವಿಧ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಭಾರತದ ಪ್ರಮುಖ ಪಾಲುದಾರ ರಾಷ್ಟ್ರಗಳೊಂದಿಗೆ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶ ಹೊಂದಿದ್ದೇನೆ” ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande