ಪ್ರಕೃತಿ ಸಮೃದ್ಧವಾಗಿದ್ದರೆ ಮಾತ್ರ ಆರೋಗ್ಯ ಸಾಧ್ಯ : ಹಿರೇಮಠ
ಗದಗ, 12 ಜೂನ್ (ಹಿ.ಸ.) : ಆ್ಯಂಕರ್ : ಜಾಗತಿಕ ತಾಪಮಾನ ಏರಿಕೆ, ಅರಣ್ಯ ನಾಶ ಮತ್ತು ಪರಿಸರ ಮಾಲಿನ್ಯದ ಪರಿಣಾಮವಾಗಿ ಮಾನವ ಜೀವನದ ಆರೋಗ್ಯ ಸಮತೋಲನವೇ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಪ್ರಕೃತಿಯ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಮೂಲ ಕರ್ತವ್ಯವಾಗಿದೆ ಎಂದು ಧ್ಯಾನ ಚಿಂತಕಿ ಶ್ರೀಮತಿ ರಾಜೇಶ್ವರಿ ಹಿರ
ಫೋಟೋ


ಗದಗ, 12 ಜೂನ್ (ಹಿ.ಸ.) :

ಆ್ಯಂಕರ್ : ಜಾಗತಿಕ ತಾಪಮಾನ ಏರಿಕೆ, ಅರಣ್ಯ ನಾಶ ಮತ್ತು ಪರಿಸರ ಮಾಲಿನ್ಯದ ಪರಿಣಾಮವಾಗಿ ಮಾನವ ಜೀವನದ ಆರೋಗ್ಯ ಸಮತೋಲನವೇ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಪ್ರಕೃತಿಯ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಮೂಲ ಕರ್ತವ್ಯವಾಗಿದೆ ಎಂದು ಧ್ಯಾನ ಚಿಂತಕಿ ಶ್ರೀಮತಿ ರಾಜೇಶ್ವರಿ ಹಿರೇಮಠ ಅವರು ಹೇಳಿದರು.

ಗದಗ ನಗರದ ಸಚ್ಚಿದಾನಂದ ಮಠದ ಆವರಣದಲ್ಲಿರುವ ‘ನಿತ್ಯಂ ಯೋಗ ಕೇಂದ್ರ’ದ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಪರಿಸರ ಜಾಗೃತಿ ಕೇಂದ್ರಿತವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ನಿತ್ಯಂ ಯೋಗ ಕೇಂದ್ರದ ಹಿರಿಯ ಸಾಧಕರು ಹಾಗೂ ಖ್ಯಾತ ಧ್ಯಾನ ಚಿಂತಕಿ ಶ್ರೀಮತಿ ರಾಜೇಶ್ವರಿ ಹಿರೇಮಠ ಅವರು ವಿವಿಧ ಜಾತಿಯ ಔಷಧಿ ಗಿಡಗಳನ್ನು ಮಠದ ಆವರಣದಲ್ಲಿ ನೆಡುವ ಮೂಲಕ ಹಸಿರು ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಸಂದೇಶವನ್ನು ನೀಡಿದ ಅವರು, “ಹಸಿರೇ ಉಸಿರು ಎಂಬ ಮಾತು ಕೇವಲ ಘೋಷವಾಕ್ಯವಲ್ಲ, ಅದು ಜೀವನದ ಮೂಲ ತತ್ವ. ಉಸಿರು ಇರುವಲ್ಲಿ ಜೀವ ಚಲನೆ ಇರುತ್ತದೆ. ಪ್ರಕೃತಿ ಸಮೃದ್ಧವಾಗಿದ್ದರೆ ಮಾತ್ರ ಮಾನವನ ಜೀವನದಲ್ಲಿ ಸಂತೋಷ, ಆನಂದ ಹಾಗೂ ಪರಿಪೂರ್ಣ ಆರೋಗ್ಯ ಸಾಧ್ಯವಾಗುತ್ತದೆ. ಪ್ರಕೃತಿಯನ್ನು ಆರಾಧಿಸುವುದು ಮತ್ತು ಸಂರಕ್ಷಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿದೆ. ಯೋಗವು ದೇಹ ಮತ್ತು ಮನಸ್ಸಿನ ಒಳಗಿನ ಆರೋಗ್ಯವನ್ನು ವೃದ್ಧಿಸಿದರೆ, ಗಿಡಮರಗಳು ಪರಿಸರವನ್ನು ಶುದ್ಧೀಕರಿಸುವ ಮೂಲಕ ಹೊರಗಿನ ಜೀವನವನ್ನು ಸಮತೋಲನಗೊಳಿಸುತ್ತವೆ” ಎಂದು ಮಾರ್ಮಿಕವಾಗಿ ನುಡಿದರು.

ಅವರು ಮುಂದುವರಿದು ಮಾತನಾಡುತ್ತಾ, ಇಂದಿನ ವೇಗದ ನಗರೀಕರಣ, ಕೈಗಾರಿಕೀಕರಣ ಹಾಗೂ ಅತಿಯಾದ ತಂತ್ರಜ್ಞಾನ ಬಳಕೆಯಿಂದಾಗಿ ಪ್ರಕೃತಿಯ ಮೇಲಿನ ಒತ್ತಡ ಹೆಚ್ಚಾಗುತ್ತಿದ್ದು, ಇದರಿಂದ ಹವಾಮಾನ ವೈಪರಿತ್ಯಗಳು, ತಾಪಮಾನ ಏರಿಕೆ, ನೀರಿನ ಕೊರತೆ ಹಾಗೂ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಗಂಭೀರ ಚಿಂತೆಯ ವಿಷಯವಾಗಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನ ಶೈಲಿಯಲ್ಲಿ ಕನಿಷ್ಠ ಒಂದೊಂದು ಮರವನ್ನು ನೆಟ್ಟು ಪೋಷಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿತ್ಯಂ ಯೋಗ ಕೇಂದ್ರದ ಪ್ರಮುಖ ಯೋಗ ಶಿಕ್ಷಕಿ ಸುಮಂಗಲಾ ಹದ್ಲಿ ಅವರು ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಕಾಂಕ್ರೀಟ್ ಕಾಡುಗಳು ವೇಗವಾಗಿ ಹೆಚ್ಚುತ್ತಿರುವುದರಿಂದ ಶುದ್ಧ ಗಾಳಿ ಮತ್ತು ಶುದ್ಧ ಪರಿಸರ ಸಿಗುವುದು ದಿನೇದಿನೇ ಕಷ್ಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಯೋಗ ಕೇಂದ್ರದ ಸಾಧಕರು ಕೇವಲ ಗಿಡಗಳನ್ನು ನೆಡುವುದಕ್ಕೆ ಸೀಮಿತವಾಗದೆ, ಅವುಗಳನ್ನು ಪೋಷಿಸಿ ಬೆಳೆಸಿ ಹಸಿರು ಪರಿಸರ ನಿರ್ಮಾಣಕ್ಕೆ ಬದ್ಧರಾಗಿದ್ದಾರೆ ಎಂದು ಅವರು ತಿಳಿಸಿದರು.

ಅವರು ಮುಂದುವರಿದು, “ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆ, ಶಾಲೆ, ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನಿಷ್ಠ ಒಂದೊಂದು ಗಿಡವನ್ನು ನೆಟ್ಟು ಅದನ್ನು ಸಂರಕ್ಷಿಸುವ ಸಂಸ್ಕೃತಿಯನ್ನು ಬೆಳೆಸಬೇಕು. ಇದರಿಂದ ಭವಿಷ್ಯ ಪೀಳಿಗೆಗೆ ಶುದ್ಧ ಗಾಳಿ, ಶುದ್ಧ ನೀರು ಹಾಗೂ ಆರೋಗ್ಯಕರ ಪರಿಸರವನ್ನು ನೀಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಈ ಹಸಿರು ಅಭಿಯಾನದಲ್ಲಿ ನಿತ್ಯಂ ಯೋಗ ಕೇಂದ್ರದ ಹಿರಿಯ ಹಾಗೂ ಕಿರಿಯ ಸಾಧಕರು, ಯೋಗಾಭ್ಯಾಸಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಿರ್ಮಲಾ, ಸುಮಿತ್ರಾ ಹೊಂಬಾಳ್, ವಿನುತಾ ಚೌಹಾಣ್, ಕವಿತಾ ಬುಳ್ಳಾ, ಪುಷ್ಪಾ ಗುರುಬಸವಣ್ಣನವರ್, ಗೀತಾ ಚಂದಪ್ಪನವರ್, ಮಂಜುಳಾ ಬೇಂದ್ರೆ, ಮಹಿಮಾ, ಶಂಶಾದ್, ಲಕ್ಷ್ಮೀ ಮುಳುಗುಂದ್, ಡಾ. ಶಿಲ್ಪಾ, ಪಲ್ಲವಿ ಶಿವಪ್ಪನಮಠ, ಸಾವಿತ್ರಿ ಕಲಾಲ್, ಸಾವಿತ್ರಿ ಅಯ್ಯಪ್ಪನಗೌಡರ್, ಸುಮಿತ್, ಸುಮನ್, ಉಷಾ, ಕವಿತಾ ರೌದಿ, ನಂದಾ ಬಡಿಗೇರ್, ಜುಬೇದಾ ಹಾಗೂ ಸುಷ್ಮಾ ಓಡಿಸ್ಸಾ ಸೇರಿದಂತೆ ನೂರಾರು ಯೋಗ ಪ್ರೇಮಿಗಳು ಸಕ್ರಿಯವಾಗಿ ಪಾಲ್ಗೊಂಡರು.

ಅಭಿಯಾನದ ಅಂಗವಾಗಿ ಭಾಗವಹಿಸಿದ ಎಲ್ಲರೂ ಗಿಡಗಳಿಗೆ ನೀರೆರೆದು, ಹಸಿರು ಪರಿಸರ ನಿರ್ಮಾಣದ ಸಂಕಲ್ಪ ಕೈಗೊಂಡರು. ಕಾರ್ಯಕ್ರಮವು ಪರಿಸರ ಜಾಗೃತಿ, ಆರೋಗ್ಯ ಸಂರಕ್ಷಣೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಯಿತು.

ನಿತ್ಯಂ ಯೋಗ ಕೇಂದ್ರದ ವತಿಯಿಂದ ಇಂತಹ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಮುಂದುವರಿಸಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹಸಿರು ಅಭಿಯಾನವನ್ನು ವಿಸ್ತರಿಸುವ ಯೋಜನೆ ಇದೆ ಎಂದು ಆಯೋಜಕರು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande