
ವಿಜಯಪುರ, 09 ಮೇ (ಹಿ.ಸ.) :
ಆಂಕರ್ : ಐತಿಹಾಸಿಕ ವಿಜಯಪುರ ನಗರದ ವಜ್ರಹನುಮಾನ್ ರೈಲ್ವೆ ಗೇಟ್ ಬಳಿ ನಿರ್ಮಾಣಗೊಳ್ಳಬೇಕಿದ್ದ ರೈಲ್ವೆ ಕೆಳಸೇತುವೆ (ಅಂಡರ್ ಪಾಸ್) ಯೋಜನೆ ಇದೀಗ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಅಗತ್ಯ ಪೂರಕ ಕಾಮಗಾರಿಗಳ ವಿಳಂಬದಿಂದ ಹಿನ್ನಡೆಯ ಅಂಚಿಗೆ ತಲುಪಿದೆ ಎಂದು ಸಂಸದ ರಮೇಶ್ ಜಿಗಜಿಣಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯಪುರ ನಗರದ ಸಂಚಾರ ದಟ್ಟಣೆ ನಿವಾರಣೆ ಹಾಗೂ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಲೆವೆಲ್ ಕ್ರಾಸಿಂಗ್ ಸಂಖ್ಯೆ-80 ರಲ್ಲಿ ರಸ್ತೆ ಕೆಳಸೇತುವೆ ನಿರ್ಮಾಣಕ್ಕೆ ಭಾರತೀಯ ರೈಲ್ವೆ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.
ಈಗಾಗಲೇ ಇದೇ ಪ್ರದೇಶದಲ್ಲಿ ರಸ್ತೆ ಮೇಲ್ಸೇತುವೆ (ಆರ್ಒಬಿ) ನಿರ್ಮಾಣಗೊಂಡಿದ್ದರೂ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಸುಮಾರು 14 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಳಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.
ಆದರೆ ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳ ಸ್ಥಳಾಂತರ ಕಾಮಗಾರಿಗಳನ್ನು ರಾಜ್ಯ ಸರ್ಕಾರದ ಅಧೀನದಲ್ಲಿರುವ ಸ್ಥಳೀಯ ಸಂಸ್ಥೆಗಳು ಇನ್ನೂ ಕೈಗೊಂಡಿಲ್ಲ. ವಿದ್ಯುತ್ ಲೈನ್ಗಳು, ಬಿಎಸ್ಎನ್ಎಲ್ ಕೇಬಲ್ಗಳು, ನೀರು ಸರಬರಾಜು ಪೈಪ್ಲೈನ್, ಒಳಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಭೂಗತ ಉಪಯುಕ್ತತೆಗಳನ್ನು ಸ್ಥಳಾಂತರಿಸುವ ಜವಾಬ್ದಾರಿ ಸ್ಥಳೀಯ ಆಡಳಿತದ ಮೇಲಿದೆ. ಈ ಕಾಮಗಾರಿಗಳಿಗೆ ಸುಮಾರು 8 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಅದರ ಅನುದಾನ ಮಂಜೂರಾತಿ ಇನ್ನೂ ಬಾಕಿ ಉಳಿದಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಸದ ರಮೇಶ ಜಿಗಜಿಣಗಿ ಅವರು, “ಜನರ ಬಹುದಿನದ ಬೇಡಿಕೆಯನ್ನು ಈಡೇರಿಸಲು ರೈಲ್ವೆ ಇಲಾಖೆ ಸಿದ್ಧವಾಗಿದ್ದರೂ ರಾಜ್ಯ ಸರ್ಕಾರದ ಸಹಕಾರದ ಕೊರತೆಯಿಂದ ಕಾಮಗಾರಿ ಮುಂದುವರಿಯುತ್ತಿಲ್ಲ. ತಕ್ಷಣವೇ ಅಗತ್ಯ ಅನುದಾನ ಬಿಡುಗಡೆ ಮಾಡಿ ಸ್ಥಳಾಂತರ ಕಾಮಗಾರಿಗಳನ್ನು ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಈ ಯೋಜನೆ ಜಾರಿಯಾದರೆ ವಿಜಯಪುರ ನಗರದ ಪ್ರಮುಖ ರೈಲ್ವೆ ಗೇಟ್ ಪ್ರದೇಶದಲ್ಲಿ ವಾಹನ ಸಂಚಾರ ಸುಗಮವಾಗಲಿದ್ದು, ಟ್ರಾಫಿಕ್ ಸಮಸ್ಯೆ ಬಹಳ ಮಟ್ಟಿಗೆ ಕಡಿಮೆಯಾಗಲಿದೆ. ಜೊತೆಗೆ ಸಾರ್ವಜನಿಕರಿಗೆ ಸಮಯ ಉಳಿತಾಯವಾಗುವ ಮೂಲಕ ನಗರದ ಅಭಿವೃದ್ಧಿಗೂ ಹೊಸ ದಿಕ್ಕು ದೊರೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಶೀಘ್ರ ಕೈಗೊಂಡಲ್ಲಿ ವಿಜಯಪುರ ನಗರದ ಜನರ ಬಹುಕಾಲದ ಕನಸಾದ ರೈಲ್ವೆ ಕೆಳಸೇತುವೆ ಯೋಜನೆ ಶೀಘ್ರ ಸಾಕಾರವಾಗಲಿದೆ ಎಂದು ಸಾರ್ವಜನಿಕರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande