
ಗದಗ, 09 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಖ್ಯಾತ ರಂಗಕಲಾವಿದೆ ಡಾ. ಉಮಾಶ್ರೀ ಅವರು ಅಭಿನಯಿಸುವ “ಶರ್ಮಿಷ್ಠೆ” ನಾಟಕ ಪ್ರದರ್ಶನವನ್ನು ಮೇ 10 ರಂದು ಗದಗ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಭಾರತರತ್ನ ಪಂ. ಭೀಮಸೇನ ಜೋಶಿ ಜಿಲ್ಲಾ ರಂಗಮಂದಿರದಲ್ಲಿ ರವಿವಾರ ಸಂಜೆ 6 ಗಂಟೆಗೆ ನಾಟಕ ಪ್ರದರ್ಶನ ಆರಂಭವಾಗಲಿದ್ದು, ಜಿಲ್ಲೆಯ ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ “ಶರ್ಮಿಷ್ಠೆ” ನಾಟಕವು ಮಾನವೀಯ ಮೌಲ್ಯಗಳು, ಭಾವನಾತ್ಮಕ ಸಂಬಂಧಗಳು ಹಾಗೂ ಸಾಮಾಜಿಕ ಬದುಕಿನ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವ ಮೂಲಕ ಪ್ರೇಕ್ಷಕರ ಮನಗೆಲ್ಲುವ ನಾಟಕವಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶರ್ಮಿಷ್ಠೆ ನಾಟಕವನ್ನು ಖ್ಯಾತ ಸಾಹಿತಿ ಡಾ. ಬೇಲೂರು ರಘುನಂದನ್ ರಚಿಸಿದ್ದು, ಚಿದಂಬರರಾವ್ ಜಂಬೆ ನಿರ್ದೇಶನ ನೀಡಿದ್ದಾರೆ. ಹಲವು ವರ್ಷಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ನಾಟಕದಲ್ಲಿ ರಂಗಕಲಾವಿದೆ ಡಾ ಉಮಾಶ್ರೀ ಅವರ ಅಭಿನಯ ವಿಶೇಷ ಆಕರ್ಷಣೆಯಾಗಿದ್ದು, ಪಾತ್ರ ನಿರ್ವಹಣೆಯ ಮೂಲಕ ಪ್ರೇಕ್ಷಕರಲ್ಲಿ ಚಿಂತನೆ ಮೂಡಿಸುವ ಶಕ್ತಿಯುಳ್ಳ ಪ್ರದರ್ಶನ ಇದಾಗಿದೆ ಎಂದು ಕಲಾರಸಿಕರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರು ವಹಿಸಲಿದ್ದು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇಂತಹ ನಾಟಕ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಶರ್ಮಿಷ್ಠೆ ನಾಟಕ ಪ್ರದರ್ಶನವು ಉಚಿತವಾಗಿದ್ದು, ವಿದ್ಯಾರ್ಥಿಗಳು, ಯುವಕರು ಹಾಗೂ ರಂಗಭೂಮಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡ ನಾಟಕ ಪರಂಪರೆಯನ್ನು ಬೆಳೆಸುವಲ್ಲಿ ಕೈಜೋಡಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / lalita MP