
ಗದಗ, 09 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ತಾಂಡಾದ ನಾಯಕರು, ಕಾರಭಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಒಗ್ಗೂಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪರಿಸರ ನಾಶ, ಮನೆಗಳಿಗೆ ಹಾನಿ ಹಾಗೂ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೂಡಲೇ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ತಾಂಡಾದ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಪರಿಸರದ ಸಮತೋಲನ ಹದಗೆಡುತ್ತಿದೆ. ಹಸಿರು ಸಂಪತ್ತು ನಾಶವಾಗುತ್ತಿದ್ದು, ಸ್ಫೋಟಕಗಳ ಬಳಕೆಯಿಂದ ಭಾರೀ ಶಬ್ದ ಹಾಗೂ ಕಂಪನ ಉಂಟಾಗಿ ತಾಂಡಾದ ಅನೇಕ ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ ಎಂದು ಗ್ರಾಮಸ್ಥರು ದೂರಿದರು.
ಗಣಿಗಾರಿಕೆಗೆ ಬಳಸಲಾಗುತ್ತಿರುವ ಟಿಪ್ಪರ್ ವಾಹನಗಳ ನಿರಂತರ ಸಂಚಾರದಿಂದ ಧೂಳು ಏಳುತ್ತಿದ್ದು, ಇದರಿಂದ ಮಕ್ಕಳಿಗೆ, ವೃದ್ಧರಿಗೆ ಹಾಗೂ ಸಾರ್ವಜನಿಕರಿಗೆ ಉಸಿರಾಟದ ಸಮಸ್ಯೆಗಳು ಹೆಚ್ಚಾಗಿವೆ ಎಂದು ಮಹಿಳೆಯರು ಆತಂಕ ವ್ಯಕ್ತಪಡಿಸಿದರು. ಜೊತೆಗೆ ಭೂಮಿಯ ಆಳದ ಪದರಗಳಿಗೆ ಹಾನಿಯಾಗುತ್ತಿರುವ ಪರಿಣಾಮ ಅಂತರ್ಜಲ ಮಟ್ಟ ಕುಸಿದು, ಕುಡಿಯುವ ನೀರಿನ ಮೂಲಗಳು ಬತ್ತಿ ಹೋಗುತ್ತಿರುವುದಾಗಿ ಪ್ರತಿಭಟನಾಕಾರರು ಹೇಳಿದರು.
ಪ್ರತಿಭಟನೆಯ ವೇಳೆ ಮಾತನಾಡಿದ ತಾಂಡಾದ ನಾಯಕರು, “ಸರ್ಕಾರ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೂಡಲೇ ಮಧ್ಯಪ್ರವೇಶಿಸಿ ಅಕ್ರಮ ಗಣಿಗಾರಿಕೆಯನ್ನು ಬಂದ್ ಮಾಡಿಸಬೇಕು. ಗಣಿಗಾರಿಕೆಗೆ ಕಾನೂನುಬದ್ಧ ಅನುಮತಿ ಇದೆಯೇ ಎಂಬುದನ್ನು ಜಿಲ್ಲಾಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಬೇಕು” ಎಂದು ಒತ್ತಾಯಿಸಿದರು.
ಸ್ಫೋಟಗಳಿಂದ ಮನೆಗಳಿಗೆ ಹಾನಿಯಾಗಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಪರಿಸರ ಮತ್ತು ಜನರ ಆರೋಗ್ಯದ ಜೊತೆ ಆಟವಾಡುವ ಗಣಿಗಾರಿಕೆ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾಂಡಾದ ಮುಖಂಡರು, ಕಾರಭಾರಿಗಳು, ಮಹಿಳೆಯರು ಹಾಗೂ ಯುವಕರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಥಳೀಯ ಆಡಳಿತ ತಕ್ಷಣ ಕ್ರಮ ಕೈಗೊಂಡು ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP