ನಾಳೆ ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ; ಬಿಗಿ ಭದ್ರತೆ ಮತ್ತು ಸಂಚಾರ ನಿಯಂತ್ರಣ
ಬೆಂಗಳೂರು, 09 ಮೇ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದು, ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಹಾಗೂ ಸಂಚಾರ ನಿಯಂತ್ರಣ ಕ್ರಮಗ
Pm


ಬೆಂಗಳೂರು, 09 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದು, ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಹಾಗೂ ಸಂಚಾರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ವರ್ಷ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ತನ್ನ 45ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಸಂಸ್ಥೆಯ ಸ್ಥಾಪಕ ರವಿಶಂಕರ್ ಗುರೂಜಿಯವರು ತಮ್ಮ 70ನೇ ಜನ್ಮದಿನವನ್ನೂ ಈ ಸಂದರ್ಭದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಕಾರ್ಯಕ್ರಮದ ಅಂಗವಾಗಿ ಪ್ರಧಾನಮಂತ್ರಿಯ ಭೇಟಿ ನಿಗದಿಯಾಗಿದೆ.

ಭೇಟಿ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಪ್ರಮುಖ ಮಾರ್ಗಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆ ನಿಯಮಗಳಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ. ಹೆಚ್ಎಎಲ್ ಪ್ರದೇಶ, ಹಳೆಯ ವಿಮಾನ ನಿಲ್ದಾಣ ರಸ್ತೆ ಹಾಗೂ ಟ್ರಿನಿಟಿ ಜಂಕ್ಷನ್ ಸುತ್ತಮುತ್ತ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಾಹನ ನಿಲುಗಡೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಹೆಚ್ಎಎಲ್ ಗೇಟ್ ನಂ.30 ಮುಂಭಾಗ, ವಿಮಾನ ನಿಲ್ದಾಣ ಎಕ್ಸಿಟ್ ರಸ್ತೆ ಮತ್ತು ಗೇಟ್ ನಂ.30 ಸಂಪರ್ಕ ರಸ್ತೆಗಳಲ್ಲಿ ಎರಡೂ ಬದಿಗಳಲ್ಲೂ ಪಾರ್ಕಿಂಗ್ ನಿರ್ಬಂಧ ವಿಧಿಸಲಾಗಿದೆ. ಎಸ್.ಡಿ ರಸ್ತೆ ಜಂಕ್ಷನ್ನ ಹೆಚ್ಎಎಲ್ ಇಲಾಖಾ ಪಾರ್ಕಿಂಗ್ ಹಾಗೂ ಸುರಂಜನ್ ದಾಸ್ ರಸ್ತೆಯ ಬಸ್ ಯಾರ್ಡ್ನಲ್ಲಿ ಗಣ್ಯ ವ್ಯಕ್ತಿಗಳು ಮತ್ತು ಹಿರಿಯ ಅಧಿಕಾರಿಗಳಿಗೆ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸಂಚಾರ ಸುಗಮತೆಗೆ ಪರ್ಯಾಯ ಮಾರ್ಗಗಳನ್ನೂ ಪೊಲೀಸ್ ಇಲಾಖೆ ಸೂಚಿಸಿದೆ. ತುಮಕೂರು ರಸ್ತೆ, ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯಿಂದ ಕನಕಪುರ ಕಡೆಗೆ ತೆರಳುವ ವಾಹನಗಳು ನಿರ್ದಿಷ್ಟ ಜಂಕ್ಷನ್ಗಳ ಮೂಲಕ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ. ಬೆಂಗಳೂರು ನಗರದಿಂದ ಕನಕಪುರ ಕಡೆಗೆ ತೆರಳುವ ವಾಹನಗಳಿಗೆ ಕೆಂಗೇರಿ, ಅಗರ, ಬಂಜಾರಪಾಳ್ಯ ಮತ್ತು ಕಗ್ಗಲಿಪುರ ಮಾರ್ಗ ಅಥವಾ ಬನ್ನೇರುಘಟ್ಟ ಮುಖ್ಯರಸ್ತೆ ಮೂಲಕ ಸಾಗುವ ಮಾರ್ಗವನ್ನು ಬಳಸಲು ಸಲಹೆ ನೀಡಲಾಗಿದೆ.

ನಗರದ ಪ್ರಮುಖ ಭಾಗಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಂಚಾರ ದಟ್ಟಣೆ ತಪ್ಪಿಸಲು ಮತ್ತು ಭದ್ರತೆ ಖಚಿತಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande