
ಬಾಗಲಕೋಟೆ, 09 ಮೇ (ಹಿ.ಸ.) :
ಆಂಕರ್ : ಹಂಪಿ ಹೇಮಕೂಟದ ಪೂಜ್ಯ ದಯಾನಂದ ಪುರಿ ಸ್ವಾಮೀಜಿ ಅವರ 36ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಬಾಗಲಕೋಟೆ ಜಿಲ್ಲೆಯ
ಬಾದಾಮಿ ನಗರದಲ್ಲಿ ಭವ್ಯ ಧಾರ್ಮಿಕ ಮೆರವಣಿಗೆ ನಡೆಸಲಾಯಿತು.
ವಿವಿಧ ಧಾರ್ಮಿಕ ಸಂಘಟನೆಗಳು, ಭಕ್ತರು ಹಾಗೂ ಸಮಾಜದ ಮುಖಂಡರ ಸಮ್ಮುಖದಲ್ಲಿ ನಡೆದ ಈ ಮೆರವಣಿಗೆ ನಗರದಲ್ಲಿ ಭಕ್ತಿಭಾವದ ವಾತಾವರಣ ಮೂಡಿಸಿತು.
ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಶ್ರೀಗಳ ಭಾವಚಿತ್ರ ಹಾಗೂ ಪಾದುಕೆಯನ್ನು ಅಲಂಕರಿಸಿದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಭಕ್ತರು ಜಯಘೋಷಗಳನ್ನು ಕೂಗಿ ಸಂಭ್ರಮಿಸಿದರು. ವಿವಿಧ ಕಲಾತಂಡಗಳು, ಡೊಳ್ಳು-ಕುಣಿತ, ನಾದಸ್ವರ ಹಾಗೂ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಮೆರವಣಿಗೆಗೆ ವಿಶೇಷ ಕಳೆ ತಂದುಕೊಡಲಾಯಿತು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತರು ಶ್ರೀಗಳ ಆಶೀರ್ವಾದ ಪಡೆದು ನಾಡಿನ ಸುಖ-ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತ ಕೋರಿದರೆ, ಯುವಕರು ಧಾರ್ಮಿಕ ಘೋಷಣೆಗಳನ್ನು ಕೂಗಿ ಉತ್ಸವದ ಸಂಭ್ರಮ ಹೆಚ್ಚಿಸಿದರು. ಹಲವು ಕಡೆಗಳಲ್ಲಿ ಭಕ್ತರಿಗೆ ಪಾನಕ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖಂಡರು ಮಾತನಾಡಿ, ದಯಾನಂದಪುರಿ ಶ್ರೀಗಳು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಅವರ ಆಧ್ಯಾತ್ಮಿಕ ಮಾರ್ಗದರ್ಶನದಿಂದ ಸಾವಿರಾರು ಭಕ್ತರಿಗೆ ಬದುಕಿನಲ್ಲಿ ಹೊಸ ದಾರಿಯ ಅರಿವು ಮೂಡಿದೆ ಎಂದು ಅಭಿಪ್ರಾಯಪಟ್ಟರು.
ಬಾದಾಮಿ ನಗರದಲ್ಲಿ ನಡೆದ ಈ ಮೆರವಣಿಗೆಗೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಉತ್ಸವದ ಹಿನ್ನೆಲೆ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಇಲಾಖೆ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಂಡಿತ್ತು.
36ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವವು ಭಕ್ತಿ, ಸಂಪ್ರದಾಯ ಮತ್ತು ಸಮಾಜದ ಒಗ್ಗಟ್ಟಿನ ಪ್ರತೀಕವಾಗಿ ಗಮನಸೆಳೆದಿದ್ದು, ಭಕ್ತರಲ್ಲಿ ವಿಶೇಷ ಉತ್ಸಾಹ ಮೂಡಿಸಿತು
ಹಿಂದೂಸ್ತಾನ್ ಸಮಾಚಾರ್ / jyothi deshpande