
ಗದಗ, 09 ಮೇ (ಹಿ.ಸ.) :
ಆ್ಯಂಕರ್ : ಗದಗ ನಗರದ ಹೃದಯಭಾಗವಾದ ಜವಳಗಲ್ಲಿಯ ರಾಜಕಾಲುವೆಯೊಳಗೆ ಹಾದು ಹೋಗಿದ್ದ ಕುಡಿಯುವ ನೀರಿನ ಪೈಪ್ಲೈನ್ ಸ್ಥಳಾಂತರ ಕಾಮಗಾರಿಗೆ ಕೊನೆಗೂ ಚಾಲನೆ ದೊರೆತಿದ್ದು, ಇದು ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ನಡೆದ ಸಾಮಾಜಿಕ ಹೋರಾಟಕ್ಕೆ ಸಂದ ಮಹತ್ವದ ಜಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ತಿಳಿಸಿದ್ದಾರೆ.
ಜವಳಗಲ್ಲಿಯ ರಾಜಕಾಲುವೆಯೊಳಗೆ ಕುಡಿಯುವ ನೀರಿನ ಪೈಪ್ಲೈನ್ ಹಾದು ಹೋಗಿದ್ದರಿಂದ ಚರಂಡಿ ನೀರು ಮಿಶ್ರಣಗೊಂಡು ಕಲುಷಿತ ನೀರು ಸರಬರಾಜಾಗುವ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ನಗರಸಭೆ, ಜಿಲ್ಲಾಡಳಿತ ಹಾಗೂ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಈ ಸಮಸ್ಯೆಯ ಕುರಿತು ಹಿಂದೂಸ್ತಾನ್ ಸಮಾಚಾರ ವಿಸ್ತೃತ ವರದಿ ಪ್ರಕಟಿಸಿದ ಬಳಿಕ ವಿಷಯ ಗಂಭೀರವಾಗಿ ಪರಿಗಣನೆಗೆ ಬಂದಿದ್ದು, ಇದೀಗ ಕಾಮಗಾರಿಗೆ ಚಾಲನೆ ದೊರೆತಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಕಾಂಗ್ರೆಸ್ ಯುವ ಮುಖಂಡ ಕೃಷ್ಣಗೌಡ್ರು ಪಾಟೀಲರ ಸೂಚನೆಯಂತೆ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ತ್ವರಿತ ಕ್ರಮ ಕೈಗೊಂಡು ಪೈಪ್ಲೈನ್ ಸ್ಥಳಾಂತರ ಕಾರ್ಯ ಆರಂಭಿಸಿರುವುದು ಸಾರ್ವಜನಿಕರ ಪರದ ಕಾಳಜಿಯ ಸಂಕೇತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸಚಿವರು, ಪೌರಾಯುಕ್ತರು ಹಾಗೂ ನಗರಸಭೆಯ ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿರುವ ಕೃಷ್ಣಾ ಹಡಪದ, ರಾಜಕಾಲುವೆ ಪಕ್ಕದಲ್ಲಿರುವ ಕೋಳಿ ಮಾರುಕಟ್ಟೆಯಿಂದ ಹೊರಬರುವ ರಕ್ತ ಮತ್ತು ಮಾಂಸದ ತ್ಯಾಜ್ಯವನ್ನು ನೇರವಾಗಿ ಕಾಲುವೆಗೆ ಸುರಿಯುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ತ್ಯಾಜ್ಯವನ್ನು ಜನವಸತಿ ಪ್ರದೇಶದಿಂದ ದೂರದಲ್ಲಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜೊತೆಗೆ ರಾಜಕಾಲುವೆ ಪಕ್ಕದ ರಸ್ತೆ ಮಣ್ಣು ಕುಸಿದು ಅಪಾಯಕಾರಿಯಾಗಿ ಪರಿಣಮಿಸಿದ್ದು, ಪ್ರತಿದಿನ ಶಾಲೆಗೆ ತೆರಳುವ ಮಕ್ಕಳು ಹಾಗೂ ಸಾರ್ವಜನಿಕರು ಜೀವಭಯದಲ್ಲಿ ಸಂಚರಿಸುವಂತಾಗಿದೆ ಎಂದಿದ್ದಾರೆ.
ಪೈಪ್ಲೈನ್ ಸ್ಥಳಾಂತರ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆ ದುರಸ್ತಿ ಕಾರ್ಯವನ್ನು ವೈಜ್ಞಾನಿಕವಾಗಿ ಕೈಗೊಂಡು ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ರಾಜಕಾಲುವೆಯಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಹಾಗೂ ಈ ಭಾಗದ ಸ್ವಚ್ಛತೆಗೆ ನಗರಸಭೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅವಳಿ ನಗರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಸಮನ್ವಯದಿಂದ ಕಾರ್ಯನಿರ್ವಹಿಸಿ, ತ್ಯಾಜ್ಯ ಮುಕ್ತ ಗದಗ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕೃಷ್ಣಾ ಎಚ್. ಹಡಪದ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
“ಜನರ ನೋವಿಗೆ ಮಿಡಿದ ಪೌರಾಯುಕ್ತರ ಕಾರ್ಯ ಶ್ಲಾಘನೀಯ” ಗದಗ-ಬೆಟಗೇರಿ ಅವಳಿ ನಗರದ ಅಭಿವೃದ್ಧಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ನಗರಸಭೆ ಪೌರಾಯುಕ್ತರ ಜನಪರ ಆಡಳಿತ ಶ್ಲಾಘನೀಯವಾಗಿದೆ. ಜವಳಗಲ್ಲಿಯ ರಾಜಕಾಲುವೆಯಲ್ಲಿನ ಗಂಭೀರ ಸಮಸ್ಯೆಯನ್ನು ಗಮನಕ್ಕೆ ತಂದ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಆರಂಭಿಸಲು ಸೂಚಿಸಿರುವುದು ಸಾರ್ವಜನಿಕರ ಆರೋಗ್ಯದ ಮೇಲಿನ ಅವರ ಕಾಳಜಿಯನ್ನು ತೋರಿಸುತ್ತದೆ. ತ್ವರಿತ ಸ್ಪಂದನೆ ನೀಡಿದ ಪೌರಾಯುಕ್ತರು ಹಾಗೂ ನಗರಸಭೆ ಸಿಬ್ಬಂದಿ ವರ್ಗಕ್ಕೆ ಗದಗ ನಾಗರಿಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ, ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP