

ಬಾಗಲಕೋಟೆ, 09 ಮೇ (ಹಿ.ಸ.) :
ಆಂಕರ್ : ಕುಟುಂಬ ರಾಜಕಾರಣದ ಕಿತ್ತಾಟದಿಂದ ಬಾಗಲಕೋಟೆ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು
ಮಹಾದೇವಿ ಮೇಟಿ ‘ಪೋಸ್ಟ್ ವಾರ್’ಗೆ ತೀವ್ರ ಚರ್ಚೆ; ಶಾಸಕ ಉಮೇಶ್ ಮೇಟಿ ಅವರಿಗೆ ಮುಜುಗರ, ಬಿಜೆಪಿಗೆ ಟೀಕಾಸ್ತ್ರ
ಬಾಗಲಕೋಟೆ ಉಪಚುನಾವಣೆಯಲ್ಲಿ ಭರ್ಜರಿ ಗೆಲುವಿನ ಸಂಭ್ರಮದಲ್ಲಿರಬೇಕಾದ ಬಾಗಲಕೋಟೆ ಕಾಂಗ್ರೆಸ್ನಲ್ಲಿ ಇದೀಗ ಕುಟುಂಬ ರಾಜಕಾರಣದ ಕಿತ್ತಾಟವೇ ಬಹಿರಂಗವಾಗಿ ಸದ್ದು ಮಾಡುತ್ತಿದೆ. ನೂತನ ಶಾಸಕ ಉಮೇಶ್ ಮೇಟಿ ಅವರ ಸಹೋದರಿ ಮಹಾದೇವಿ ಮೇಟಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿರುವ ‘ಪೋಸ್ಟ್ ವಾರ್’ ಇದೀಗ ಜಿಲ್ಲಾ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ಮೂಡಿಸಿದ್ದು, ಬಿಜೆಪಿಗೆ ಟೀಕೆ ಮಾಡಲು ಹೊಸ ಅಸ್ತ್ರ ಒದಗಿಸಿದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶಾಸಕ ಉಮೇಶ್ ಮೇಟಿ ಅವರು ಗೆಲುವಿನ ನಂತರ ರಾಜ್ಯ ನಾಯಕರನ್ನು ಭೇಟಿ ಮಾಡಿ ಕ್ಷೇತ್ರಾಭಿವೃದ್ಧಿಗೆ ವೇಗ ನೀಡುವತ್ತ ಗಮನ ಹರಿಸುತ್ತಿರುವ ಸಂದರ್ಭದಲ್ಲಿ, ಸ್ವತಃ ತಮ್ಮ ಕುಟುಂಬದೊಳಗಿನ ಅಸಮಾಧಾನವೇ ಅವರಿಗೆ ರಾಜಕೀಯವಾಗಿ ಮುಜುಗರ ಉಂಟುಮಾಡುತ್ತಿದೆ ಎನ್ನಲಾಗಿದೆ.
ವಿಶೇಷವಾಗಿ ಶಾಸಕರ ಆಪ್ತ ವಲಯದ ಪ್ರಮುಖ ವ್ಯಕ್ತಿಯಾಗಿರುವ ಹೊಳೆಬಸು ಶೆಟ್ಟರ್ ಅವರ ಫೋಟೋ ಮೇಲೆ ಕ್ರಾಸ್ ಮಾರ್ಕ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಹೊಳೆಬಸು ಶೆಟ್ಟರ್ ಅವರು ದಿವಂಗತ ಎಚ್.ವೈ. ಮೇಟಿ ಅವರ ಕಾಲದಿಂದಲೂ ಕುಟುಂಬದೊಂದಿಗೆ ಆಪ್ತ ಸಂಪರ್ಕ ಹೊಂದಿದ್ದವರು. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಹ ಆಪ್ತರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಾದೇವಿ ಮೇಟಿ ಅವರು ಅವರನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ನಿರಂತರ ಸಾಮಾಜಿಕ ಜಾಲತಾಣದ ಪೋಸ್ಟ್ಗಳು ವೈಯಕ್ತಿಕ ಅಸಮಾಧಾನದ ಪ್ರತಿಫಲವಾಗಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಟಿಕೆಟ್ ಹಂಚಿಕೆ ಸಂದರ್ಭದಲ್ಲಿಯೇ ಮಹಾದೇವಿ ಮೇಟಿ ಅವರು ತಮಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದರು ಎನ್ನಲಾಗುತ್ತಿದೆ. ಅಂತಿಮವಾಗಿ ಪಕ್ಷ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಿದ ನಂತರವೂ, ಕುಟುಂಬದೊಳಗಿನ ಅಸಮಾಧಾನ ಸಂಪೂರ್ಣ ಶಮನವಾಗಿಲ್ಲ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಇದೀಗ ಅವರು ‘ಶ್ಯಾಡೋ ಶಾಸಕಿ’ಯಂತೆ ವರ್ತಿಸಲು ಯತ್ನಿಸುತ್ತಿದ್ದಾರೆ ಎಂಬ ಟೀಕೆಗಳು ಕಾಂಗ್ರೆಸ್ ವಲಯದಿಂದಲೇ ಕೇಳಿಬರುತ್ತಿವೆ.
ಹೊಳೆಬಸು ಶೆಟ್ಟರ್ ಅವರ ಪ್ರಭಾವವನ್ನು ಪ್ರಶ್ನಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿರುವುದು ಕೇವಲ ವೈಯಕ್ತಿಕ ಅಸಮಾಧಾನವಲ್ಲ, ಶಾಸಕ ಉಮೇಶ್ ಮೇಟಿ ಅವರ ಸುತ್ತಲಿನ ಆಪ್ತವಲಯವನ್ನು ದುರ್ಬಲಗೊಳಿಸುವ ರಾಜಕೀಯ ಪ್ರಯತ್ನವಾಗಿರಬಹುದು ಎಂಬ ಅನುಮಾನಗಳೂ ವ್ಯಕ್ತವಾಗಿವೆ. ಇದರ ಪರಿಣಾಮವಾಗಿ ಸ್ಥಳೀಯ ಕಾಂಗ್ರೆಸ್ನಲ್ಲಿ ಒಳಜಗಳ ತೀವ್ರವಾಗುತ್ತಿರುವುದು ಕಾರ್ಯಕರ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈ ಒಳಜಗಳವನ್ನು ಬಿಜೆಪಿ ನಾಯಕರು ರಾಜಕೀಯವಾಗಿ ಬಳಸಿಕೊಳ್ಳಲು ಆರಂಭಿಸಿದ್ದಾರೆ. “ಗೆದ್ದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಮನೆಯಲ್ಲಿ ಗೊಂದಲ ಶುರುವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಹೇಗೆ ಸಾಧ್ಯ?” ಎಂದು ಬಿಜೆಪಿ ಮುಖಂಡರು ಲೇವಡಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಒಳಗಿನ ಒಗ್ಗಟ್ಟಿನ ಕೊರತೆಯನ್ನು ತೋರಿಸಲು ಈ ಬೆಳವಣಿಗೆ ಬಿಜೆಪಿಗೆ ದೊಡ್ಡ ಅಸ್ತ್ರವಾಗಿದೆಯೆಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಇನ್ನೊಂದೆಡೆ, ಮಹಾದೇವಿ ಮೇಟಿ ಅವರ ಈ ರೀತಿಯ ಬಹಿರಂಗ ಅಸಮಾಧಾನದ ಹಿಂದೆ ಜಿಲ್ಲೆಯ ಕೆಲ ಪ್ರಭಾವಿ ಕಾಂಗ್ರೆಸ್ ನಾಯಕರ ಪ್ರೇರಣೆ ಇರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಹೊಳೆಬಸು ಶೆಟ್ಟರ್ ಅವರನ್ನು ರಾಜಕೀಯವಾಗಿ ಸೈಡ್ಲೈನ್ ಮಾಡಲು ಮಹಾದೇವಿ ಅವರನ್ನು ಮುಂದಿಟ್ಟುಕೊಳ್ಳಲಾಗುತ್ತಿದೆ ಎಂಬ ಮಾತುಗಳು ಜಿಲ್ಲಾ ರಾಜಕಾರಣದಲ್ಲಿ ಹರಿದಾಡುತ್ತಿವೆ. ಈ ಎಲ್ಲ ಬೆಳವಣಿಗೆಗಳು ಶಾಸಕ ಉಮೇಶ್ ಮೇಟಿ ಅವರಿಗೆ ರಾಜಕೀಯವಾಗಿ ದೊಡ್ಡ ಸವಾಲಾಗುತ್ತಿವೆ.
ರಾಜಕೀಯ ವಿಶ್ಲೇಷಕ ಸಿದ್ದು ಬೀಳಗಿ ಅವರ ಅಭಿಪ್ರಾಯದಂತೆ, ಗೆಲುವಿನ ನಂತರ ಪಕ್ಷದೊಳಗಿನ ಅಸಮಾಧಾನವನ್ನು ತಕ್ಷಣವೇ ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದೆ. ಸಾರ್ವಜನಿಕರಲ್ಲಿ ಪಕ್ಷದ ಬಗ್ಗೆ ತಪ್ಪು ಸಂದೇಶ ಹೋಗುತ್ತಿರುವುದು ಕಾರ್ಯಕರ್ತರಲ್ಲಿಯೂ ಬೇಸರಕ್ಕೆ ಕಾರಣವಾಗಿದೆ.
ಹೀಗಾಗಿ ಶಾಸಕ ಉಮೇಶ್ ಮೇಟಿ ಅವರು ಕುಟುಂಬದೊಳಗಿನ ಈ ಅಸಮಾಧಾನಕ್ಕೆ ಶೀಘ್ರವೇ ಕಡಿವಾಣ ಹಾಕಿ ಪಕ್ಷದ ಸಂಘಟನೆ ಹಾಗೂ ಕ್ಷೇತ್ರಾಭಿವೃದ್ಧಿಯತ್ತ ಗಮನ ಹರಿಸುವುದು ಅಗತ್ಯವಾಗಿದೆ. ಇಲ್ಲವಾದರೆ ಕುಟುಂಬ ರಾಜಕಾರಣದ ಈ ಬಹಿರಂಗ ಸಂಘರ್ಷವೇ ಕಾಂಗ್ರೆಸ್ಗೆ ದೊಡ್ಡ ಮುಳ್ಳಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂಬ ಅಭಿಪ್ರಾಯಗಳು ಬಲವಾಗಿ ಕೇಳಿ ಬರುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / jyothi deshpande