ಬಿರು ಬಿಸಿಲಿನಲ್ಲೂ ವನ್ಯಜೀವಿಗಳಿಗೆ ಕೂಲ್ ಕೂಲ್ ಆರೈಕೆ.
ಗದಗ, 09 ಮೇ (ಹಿ.ಸ.) : ಆ್ಯಂಕರ್ : ರಾಜ್ಯಾದ್ಯಂತ ದಿನೇದಿನೇ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಬಿಸಿಲಿನ ತೀವ್ರತೆ ಮನುಷ್ಯರನ್ನು ಮಾತ್ರವಲ್ಲದೆ ವನ್ಯಜೀವಿಗಳನ್ನೂ ಕಂಗೆಡಿಸಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾ
ಫೋಟೋ


ಗದಗ, 09 ಮೇ (ಹಿ.ಸ.) :

ಆ್ಯಂಕರ್ : ರಾಜ್ಯಾದ್ಯಂತ ದಿನೇದಿನೇ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಬಿಸಿಲಿನ ತೀವ್ರತೆ ಮನುಷ್ಯರನ್ನು ಮಾತ್ರವಲ್ಲದೆ ವನ್ಯಜೀವಿಗಳನ್ನೂ ಕಂಗೆಡಿಸಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಬಿಸಿಲಿನ ತಾಪದಿಂದ ರಕ್ಷಿಸಲು ಅರಣ್ಯ ಇಲಾಖೆ ವಿಶೇಷ ಕ್ರಮಗಳನ್ನು ಕೈಗೊಂಡಿದೆ.

ಮೃಗಾಲಯದಲ್ಲಿರುವ 42ಕ್ಕೂ ಹೆಚ್ಚು ಪ್ರಭೇದಗಳ ವನ್ಯಜೀವಿಗಳಿಗೆ ತಂಪಾದ ವಾತಾವರಣ ನಿರ್ಮಿಸಲು ಸ್ಪ್ರಿಂಕ್ಲರ್, ಫಾಗರ್ ಹಾಗೂ ಐಸ್ ನೀರಿನ ವ್ಯವಸ್ಥೆ ಮಾಡಲಾಗಿದೆ. ಹುಲಿ, ಸಿಂಹ, ಚಿರತೆ, ಕರಡಿ, ಕೃಷ್ಣಮೃಗ, ನರಿ, ನವಿಲು ಸೇರಿದಂತೆ ಹಲವು ಪ್ರಾಣಿ-ಪಕ್ಷಿಗಳಿಗೆ ವೈದ್ಯರ ಸಲಹೆ ಮೇರೆಗೆ ವಿಶೇಷ ಆರೈಕೆ ನೀಡಲಾಗುತ್ತಿದೆ.

ಬಿಸಿಲಿನ ತೀವ್ರತೆಯಿಂದ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳದಂತೆ ಸಿಬ್ಬಂದಿ ಹಗಲು-ರಾತ್ರಿ ನಿಗಾವಹಿಸಿದ್ದಾರೆ. ಸಾಮಾನ್ಯ ಆಹಾರದ ಜೊತೆಗೆ ಗ್ಲುಕೋಸ್ ಮಿಶ್ರಿತ ನೀರು, ತಂಪಾದ ಹಣ್ಣುಗಳು ಹಾಗೂ ಶೀತಲ ಆಹಾರವನ್ನು ನೀಡಲಾಗುತ್ತಿದೆ. ಕೆಲವು ಪ್ರಾಣಿಗಳಿಗೆ ಆಹಾರವನ್ನು ಫ್ರೀಜ್ ಮಾಡಿ ನೀಡುತ್ತಿರುವುದು ವಿಶೇಷವಾಗಿದೆ.

ಮೃಗಾಲಯದ ಸಿಬ್ಬಂದಿ ವಿನೋದ್ ಕುಮಾರ್ ಕುಲಕರ್ಣಿ ಮಾತನಾಡಿ, “ಬೇಸಿಗೆಯ ತಾಪಮಾನ ಹೆಚ್ಚಿರುವುದರಿಂದ ಪ್ರಾಣಿಗಳಿಗೆ ಹೆಚ್ಚುವರಿ ಕಾಳಜಿ ವಹಿಸಲಾಗುತ್ತಿದೆ. ವೈದ್ಯರ ಸಲಹೆ ಮೇರೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಪ್ರಾಣಿಗಳ ಆರೋಗ್ಯದ ಮೇಲೆ ನಿರಂತರ ನಿಗಾವಹಿಸಲಾಗಿದೆ,” ಎಂದು ತಿಳಿಸಿದರು.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕುಟುಂಬ ಸಮೇತರಾಗಿ ಬಂದ ಜನರು ಪ್ರಾಣಿ-ಪಕ್ಷಿಗಳ ಕಲರವವನ್ನು ಕಣ್ತುಂಬಿಕೊಂಡು ಖುಷಿಪಡುತ್ತಿದ್ದಾರೆ. ಪ್ರಾಣಿಗಳಿಗೆ ತಂಪಾದ ವಾತಾವರಣ ಹಾಗೂ ವಿಶೇಷ ಆರೈಕೆ ನೀಡುತ್ತಿರುವ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರೇಕ್ಷಕ ಶಮೀಮ್ ಮಾತನಾಡಿ, “ಇಷ್ಟೊಂದು ಬಿಸಿಲಿನ ನಡುವೆಯೂ ಪ್ರಾಣಿಗಳಿಗೆ ಉತ್ತಮ ಆರೈಕೆ ನೀಡುತ್ತಿರುವುದು ಸಂತೋಷದ ವಿಚಾರ. ಸಿಬ್ಬಂದಿ ಹಾಗೂ ವೈದ್ಯರು ನಿಜವಾಗಿಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ,” ಎಂದು ಹೇಳಿದರು.

ಒಟ್ಟಾರೆ ಬಿರು ಬಿಸಿಲಿನ ನಡುವೆಯೂ ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳು ಮಾನವೀಯತೆ ಮತ್ತು ಪರಿಸರ ಸಂರಕ್ಷಣೆಯ ಕಾಳಜಿಯನ್ನು ತೋರಿಸುತ್ತಿದ್ದು, ಪ್ರಾಣಿ ಪ್ರಿಯರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿವೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande