
ತುಮಕೂರು, 09 ಮೇ (ಹಿ.ಸ.) :
ಆ್ಯಂಕರ್ : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಸಮೀಪ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಲ್ಟೋ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಗೊಬ್ಬರ ತುಂಬಿಕೊಂಡು ಸಾಗುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹಗಳನ್ನು ಹೊರತೆಗೆದಲು ಸ್ಥಳೀಯರು ಮತ್ತು ಪೊಲೀಸರು ಹರಸಾಹಸ ಪಟ್ಟರು.
ಮೃತರನ್ನು ಮಂಡ್ಯ ಜಿಲ್ಲೆಯ ಸ್ವರ್ಣಸಂದ್ರ ನಿವಾಸಿಗಳಾದ ಕುಮಾರ ನರಸಿಂಹಸ್ವಾಮಿ, ಅವರ ಪತ್ನಿ ಗಾಯತ್ರಿ (60), ಸಹೋದರಿ ಗಾಯತ್ರಿ (55) ಹಾಗೂ ಕಾರು ಚಾಲಕ ಎಂದು ಗುರುತಿಸಲಾಗಿದೆ.
ಪೋಲಿಸರು ನೀಡಿರುವ ಮಾಹಿತಿಯಂತೆ, ಕುಮಾರ ನರಸಿಂಹಸ್ವಾಮಿ ಅವರು ಪತ್ನಿ ಮತ್ತು ಸಹೋದರಿಯೊಂದಿಗೆ ನಿನ್ನೆ ತುಮಕೂರಿಗೆ ಬಂದಿದ್ದರು. ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಂದು ದೇವರಾಯನದುರ್ಗಕ್ಕೆ ತೆರಳಿ ದೇವರ ದರ್ಶನ ಪಡೆದು ಮಂಡ್ಯಕ್ಕೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಆಲ್ಟೋ ಕಾರು ಛಿದ್ರ ಛಿದ್ರವಾಗಿದ್ದು, ಕಾರಿನೊಳಗಿದ್ದವರು ಹೊರಬರಲು ಸಾಧ್ಯವಾಗದೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa