

ಗದಗ, 09 ಮೇ (ಹಿ.ಸ.) :
ಆ್ಯಂಕರ್ : ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ತೀವ್ರ ಜಲಕ್ಷಾಮ ಉಂಟಾಗಿದ್ದು, ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹೆಚ್ಚಾಗಿ ವಾಸಿಸುವ ಗ್ರಾಮವೆಂದೇ ಪರಿಚಿತವಾಗಿರುವ ತಿಮ್ಮಾಪುರದಲ್ಲಿ ನೀರಿನ ಸಮಸ್ಯೆ ಗಂಭೀರ ರೂಪ ತಾಳಿದ್ದರೂ ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ ತಾಲೂಕಿನ ಕೊನೆಯ ಹಳ್ಳಿಯಾದ ತಿಮ್ಮಾಪುರ ಗ್ರಾಮವು ರೋಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು, ಸುಮಾರು ಐದು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಗ್ರಾಮಕ್ಕೆ ಕುಡಿಯುವ ನೀರು ಒದಗಿಸುತ್ತಿದ್ದ ಪ್ರಮುಖ ಕೆರೆ ಈ ಬಾರಿ ರಣಭೀಕರ ಬಿಸಿಲಿನ ಪರಿಣಾಮ ಸಂಪೂರ್ಣವಾಗಿ ಬತ್ತಿ ಹೋಗಿದೆ. ಇದರಿಂದ ಗ್ರಾಮಸ್ಥರು ನೀರಿಗಾಗಿ ಬೈಕ್, ತಳ್ಳುವ ಗಾಡಿ ಹಾಗೂ ಇತರೆ ವಾಹನಗಳ ಮೂಲಕ ಕಿಲೋಮೀಟರ್ಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಸುತ್ತಮುತ್ತಲಿನ ಜಮೀನಿನ ಕೃಷಿ ಹೊಂಡಗಳು ಹಾಗೂ ಕೆರೆಯ ಪಕ್ಕದಲ್ಲಿ ಉಳಿದಿರುವ ಅಲ್ಪ ಪ್ರಮಾಣದ ಕಲುಷಿತ ನೀರನ್ನೇ ಗ್ರಾಮಸ್ಥರು ಬಳಕೆ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನೀರನ್ನು ಸೇವಿಸುತ್ತಿರುವ ಪರಿಣಾಮ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮಸ್ಥ ಯಲ್ಲಪ್ಪ ಮಾತನಾಡಿ, “ಗ್ರಾಮದಲ್ಲಿ ಮನುಷ್ಯರು ಮಾತ್ರವಲ್ಲ, ಜಾನುವಾರುಗಳಿಗೂ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ತುಂಗಭದ್ರಾ ನದಿಯಿಂದ ನೀರು ಸರಬರಾಜು ಮಾಡುವ ವ್ಯವಸ್ಥೆ ಇದ್ದರೂ ಸಮರ್ಪಕವಾಗಿ ನೀರು ಬರುತ್ತಿಲ್ಲ. ಮನೆಗಳ ಮುಂದೆ ನಳಗಳನ್ನು ಅಳವಡಿಸಿದ್ದರೂ ಹನಿ ನೀರು ಸಹ ಬರುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೊಬ್ಬ ಮಹಿಳೆ ಯಲ್ಲವ್ವಾ ಮಾತನಾಡಿ, “ನಮ್ಮೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಸಂಬಂಧಿಕರು ಕೂಡ ಮನೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮದುವೆ ಸಂಬಂಧಗಳಿಗೂ ಸಮಸ್ಯೆಯಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಗ್ರಾಮದಲ್ಲಿ ಪೈಪ್ಲೈನ್ ಹಾಗೂ ನಳಗಳನ್ನು ಅಳವಡಿಸಿದ್ದರೂ ನೀರು ಪೂರೈಕೆ ಮಾತ್ರ ಸಮರ್ಪಕವಾಗಿ ಆಗುತ್ತಿಲ್ಲ. ಗ್ರಾಮದಲ್ಲಿ ಇಷ್ಟೊಂದು ಗಂಭೀರ ನೀರಿನ ಅಭಾವವಿದ್ದರೂ ಆಡಳಿತ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರೂ, ತಿಮ್ಮಾಪುರ ಗ್ರಾಮದ ಸಮಸ್ಯೆಯತ್ತ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು ಹಾಗೂ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP