
ಹುಬ್ಬಳ್ಳಿ, 09 ಮೇ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಶೃತಿ. ಎನ್.ಎಸ್. ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಸಂಬಂಧಿತ “ಅಕ್ಕ ಪಡೆ ಯೋಜನೆ”ಯ ಮೇಲ್ವಿಚಾರಣೆ ಹಾಗೂ ಪರಿಶೀಲನಾ ಸಮಿತಿ ಸಭೆ ಶನಿವಾರ ನಡೆಯಿತು.
ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಯೋಜನೆಯ ಅನುಷ್ಠಾನ ಪ್ರಗತಿ, ಮಹಿಳಾ ಸುರಕ್ಷತಾ ಕ್ರಮಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳ ಕುರಿತು ಚರ್ಚಿಸಿದರು.
ಸಭೆಯಲ್ಲಿ ಅಕ್ಕ ಪಡೆ ಸಿಬ್ಬಂದಿಗಳ ಕಾರ್ಯವೈಖರಿ, ಶಾಲಾ–ಕಾಲೇಜುಗಳ ಬಳಿ ಮಹಿಳಾ ಸುರಕ್ಷತಾ ಕ್ರಮಗಳು, ತುರ್ತು ಸಹಾಯ ವ್ಯವಸ್ಥೆ, ದೂರು ಸ್ವೀಕಾರ ಮತ್ತು ಸ್ಪಂದನಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಮಹಿಳೆಯರು ಮತ್ತು ಮಕ್ಕಳ ಮೇಲಿನ ಕಿರುಕುಳ ಹಾಗೂ ಅಪರಾಧ ತಡೆಗಟ್ಟಲು ಇಲಾಖೆಗಳ ನಡುವೆ ಸಮನ್ವಯ ಹೆಚ್ಚಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಡಿಸಿಪಿ ಶೃತಿ ಎನ್ ಎಸ್ ಅವರು ಮಾತನಾಡಿ, ಮಹಿಳೆಯರಲ್ಲಿ ಭದ್ರತೆಯ ಭಾವನೆ ಮೂಡಿಸುವುದು ಅಕ್ಕ ಪಡೆ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಇನ್ನಷ್ಟು ಪರಿಣಾಮಕಾರಿ ಕಾರ್ಯಾಚರಣೆ ನಡೆಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಅಕ್ಕ ಪಡೆ ಸಿಬ್ಬಂದಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa