
ಬಾಗಲಕೋಟೆ, 08 ಮೇ (ಹಿ.ಸ.) :
ಆಂಕರ್ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಉಮೇಶ ಮೇಟಿ ಅವರನ್ನು ಇಂದು ಬಾಗಲಕೋಟೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಉಪಸ್ಥಿತರಿದ್ದು, ನೂತನ ಶಾಸಕರಿಗೆ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಾಯಕ ಆರ್.ಬಿ. ತಿಮ್ಮಾಪುರ ಅವರು, ಬಾಗಲಕೋಟೆ ಕ್ಷೇತ್ರದ ಜನರು ಅಭಿವೃದ್ಧಿ ಮತ್ತು ಜನಪರ ಆಡಳಿತದ ನಿರೀಕ್ಷೆಯೊಂದಿಗೆ ಉಮೇಶ ಮೇಟಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನಪರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯ, ಕುಡಿಯುವ ನೀರು, ರಸ್ತೆ, ಶಿಕ್ಷಣ, ಆರೋಗ್ಯ ಹಾಗೂ ಯುವಕರ ಉದ್ಯೋಗಾವಕಾಶಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಜನರ ವಿಶ್ವಾಸಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಮುನ್ನಡೆಸುವ ಜವಾಬ್ದಾರಿ ಈಗ ನೂತನ ಶಾಸಕರ ಮೇಲಿದೆ ಎಂದು ಹೇಳಿದರು.
ಈ ವೇಳೆ ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಕೀಲ ಅಶೋಕ್ ಕಿವಡಿ, ಕಾಂಗ್ರೆಸ್ ಮುಖಂಡರಾದ ಸಂತೋಷ್ ಹೊಕ್ರಾಣಿ ಸೇರಿದಂತೆ ಹಲವು ಪ್ರಮುಖ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಉಮೇಶ ಮೇಟಿ ಅವರಿಗೆ ಹಾರ ಹಾಕಿ ಸನ್ಮಾನಿಸಿ ಶುಭಾಶಯಗಳನ್ನು ತಿಳಿಸಿದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಉಮೇಶ ಮೇಟಿ ಅವರು, ಕ್ಷೇತ್ರದ ಜನತೆ ನೀಡಿರುವ ಆಶೀರ್ವಾದ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿ, ಅಭಿವೃದ್ಧಿ ಹಾಗೂ ಜನಸೇವೆಗಾಗಿ ಸದಾ ಬದ್ಧನಾಗಿರುವುದಾಗಿ ಹೇಳಿದರು. ಎಲ್ಲಾ ವರ್ಗದ ಜನರನ್ನು ಜೊತೆಯಾಗಿ ತೆಗೆದುಕೊಂಡು ಬಾಗಲಕೋಟೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande