
ಗದಗ, 08 ಮೇ (ಹಿ.ಸ.) :
ಆ್ಯಂಕರ್ : ಗದಗ ನಗರದ ಜವಳಿ ಗಲ್ಲಿಯ ರಾಜಕಾಲುವೆ ಪ್ರದೇಶದಲ್ಲಿ ಉಂಟಾಗಿರುವ ಅವ್ಯವಸ್ಥೆ ಇದೀಗ ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷತೆಗೆ ದೊಡ್ಡ ಅಪಾಯವಾಗಿ ಪರಿಣಮಿಸಿದೆ. ಚರಂಡಿ ನೀರಿನ ಮಧ್ಯೆಯೇ ಕುಡಿಯುವ ನೀರಿನ ಪೈಪ್ಲೈನ್ ಹಾದು ಹೋಗುತ್ತಿರುವುದು ಹಾಗೂ ಪಕ್ಕದ ಮುಖ್ಯ ರಸ್ತೆ ಕುಸಿಯುವ ಹಂತ ತಲುಪಿದ್ದರೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ, ತುಂಗಭದ್ರಾ ನದಿಯಿಂದ ಸರಬರಾಜಾಗುವ ಮುಖ್ಯ ಕುಡಿಯುವ ನೀರಿನ ಪೈಪ್ಲೈನ್ ಅನ್ನು ಜವಳಿ ಗಲ್ಲಿಯ ರಾಜಕಾಲುವೆಯ ಕೊಳಚೆಯಲ್ಲೇ ಅಳವಡಿಸಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಆರೋಪಿಸಿದರು.
ರಾಜಕಾಲುವೆಯಲ್ಲಿ ಹರಿಯುತ್ತಿರುವ ಕೊಳಚೆ ನೀರಿನ ನಡುವೆ ಪೈಪ್ಲೈನ್ ಹಾದು ಹೋಗಿರುವುದಲ್ಲದೆ, ಅದರ ಮೇಲೆಯೇ ಟನ್ಗಟ್ಟಲೆ ಪ್ಲಾಸ್ಟಿಕ್ ಹಾಗೂ ಘನ ತ್ಯಾಜ್ಯ ಕೂಡಿಕೊಂಡಿದೆ. “ಪೈಪ್ಲೈನ್ನಲ್ಲಿ ಸಣ್ಣ ಬಿರುಕು ಉಂಟಾದರೂ ವಿಷಕಾರಿ ಚರಂಡಿ ನೀರು ನೇರವಾಗಿ ಕುಡಿಯುವ ನೀರಿಗೆ ಸೇರಿ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ” ಎಂದು ಅವರು ಎಚ್ಚರಿಸಿದರು.
ಡೋರಗಲ್ಲಿ, ಹೊಂಬಳನಾಕಾ, ಜನತಾ ಕಾಲೋನಿ, ಮ್ಯಾಗೇರಿ ಓಣಿ ಹಾಗೂ ಅಂಬೇಡ್ಕರ್ ನಗರದ ನೂರಾರು ಕುಟುಂಬಗಳಿಗೆ ಇದೇ ಪೈಪ್ಲೈನ್ ಮೂಲಕ ನೀರು ಸರಬರಾಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಲರಾ, ಟೈಫಾಯಿಡ್ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇನ್ನು ರಾಜಕಾಲುವೆಯ ಪಕ್ಕದಲ್ಲೇ ಕಾರ್ಯನಿರ್ವಹಿಸುತ್ತಿರುವ ಕೋಳಿ ಮಾರುಕಟ್ಟೆಯ ತ್ಯಾಜ್ಯವನ್ನು ನೇರವಾಗಿ ಕಾಲುವೆಗೆ ಹಾಗೂ ಪೈಪ್ಲೈನ್ ಮೇಲೆಯೇ ಸುರಿಯಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಕೊಳೆತ ಮಾಂಸ, ರಕ್ತ ಹಾಗೂ ಇತರೆ ತ್ಯಾಜ್ಯದಿಂದ ಇಡೀ ಪ್ರದೇಶ ದುರ್ವಾಸನೆಯಿಂದ ಕೂಡಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೂ ಮೀರಿಯಾಗಿ ರಾಜಕಾಲುವೆಯ ಪಕ್ಕದಲ್ಲಿರುವ ಮುಖ್ಯ ಸಿಸಿ ರಸ್ತೆಯ ಅಡಿಭಾಗದ ಮಣ್ಣು ಸಂಪೂರ್ಣ ಕೊಚ್ಚಿಹೋಗಿದ್ದು, ರಸ್ತೆ ಗಾಳಿಯಲ್ಲಿ ತೇಲುತ್ತಿರುವಂತಾಗಿದೆ. ಪ್ರತಿದಿನ ಶಾಲಾ ಮಕ್ಕಳು, ಕಾರ್ಮಿಕರು ಹಾಗೂ ಸಾರ್ವಜನಿಕರು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಯಾವ ಕ್ಷಣದಲ್ಲಾದರೂ ರಸ್ತೆ ಕುಸಿದು ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ರೈಲ್ವೆ ಮೇಲ್ಸೇತುವೆ ಕಾಮಗಾರಿಯಿಂದಾಗಿ ಬಸ್ ಹಾಗೂ ಭಾರಿ ವಾಹನ ಸಂಚಾರ ಕಡಿಮೆಯಾಗಿರುವುದರಿಂದ ದೊಡ್ಡ ದುರಂತ ತಪ್ಪಿದೆ. ಆದರೆ ಮುಂದಿನ ದಿನಗಳಲ್ಲಿ ಭಾರಿ ವಾಹನ ಸಂಚಾರ ಆರಂಭವಾದರೆ ರಸ್ತೆ ಕುಸಿದು ಪ್ರಾಣಹಾನಿಯಾಗುವ ಸಂಭವ ಹೆಚ್ಚಿದೆ ಎಂದು ಕೃಷ್ಣಾ ಎಚ್. ಹಡಪದ ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರು ತಕ್ಷಣ ಮಧ್ಯಸ್ಥಿಕೆ ವಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದರು. ರಾಜಕಾಲುವೆ ಸ್ವಚ್ಛಗೊಳಿಸುವುದು, ಕುಡಿಯುವ ನೀರಿನ ಪೈಪ್ಲೈನ್ ಅನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು ಹಾಗೂ ಕುಸಿಯುತ್ತಿರುವ ರಸ್ತೆಯನ್ನು ತುರ್ತು ದುರಸ್ತಿ ಮಾಡುವಂತೆ ಒತ್ತಾಯಿಸಿದರು.
“ಇದು ಕುಡಿಯುವ ನೀರೋ ಅಥವಾ ವಿಷವೋ?”
“ರಾಜಕಾಲುವೆಯ ಕೊಳಚೆ ಮತ್ತು ಕೋಳಿ ತ್ಯಾಜ್ಯದ ಮಧ್ಯೆಯೇ ಕುಡಿಯುವ ನೀರಿನ ಪೈಪ್ಲೈನ್ ಹೂತು ಹೋಗಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವ ಸಂಗತಿ. ಮತ್ತೊಂದೆಡೆ ಸಿಸಿ ರಸ್ತೆ ಅಡಿಪಾಯ ಕಳೆದುಕೊಂಡು ಗಾಳಿಯಲ್ಲಿ ತೇಲುತ್ತಿದೆ. ಅಧಿಕಾರಿಗಳು ದೊಡ್ಡ ದುರಂತಕ್ಕಾಗಿ ಕಾಯುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟು ಕೂಡಲೇ ಪೈಪ್ಲೈನ್ ಸ್ಥಳಾಂತರಿಸಿ ರಸ್ತೆ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ನಗರಸಭೆ ಎದುರು ಉಗ್ರ ಹೋರಾಟ ಅನಿವಾರ್ಯ ಎಂದು ಸಮಾಜಿಕ ಹೋರಾಟಗಾರ ಕೃಷ್ಣಾ ಎಚ್. ಹಡಪದ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP