ವಿಟ್ಟಪ್ಪನಹಳ್ಳಿಯಲ್ಲಿ ಜನ ಜೀವನ್ ಮಿಷನ್ ಕಾಮಗಾರಿಯಲ್ಲಿ ಕಳಪೆ ; ಗ್ರಾಮಸ್ಥರ ಆರೋಪ
ವಿಟ್ಟಪ್ಪನಹಳ್ಳಿಯಲ್ಲಿ ಜನ ಜೀವನ್ ಮಿಷನ್ ಕಾಮಗಾರಿಯಲ್ಲಿ ಕಳಪೆ ; ಗ್ರಾಮಸ್ಥರ ಆರೋಪ
ಕೋಲಾರ ತಾಲ್ಲೂಕು ವಿಟಪ್ಪನಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಕಳಪೆಯಾಗಿದ್ದು, ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಕೋಲಾರ,ಮೇ.೦೮ (ಹಿ.ಸ) :

ಆ್ಯಂಕರ್ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಗಂಭೀರ ಅಕ್ರಮಗಳು ಹಾಗೂ ಕಳಪೆ ಕಾಮಗಾರಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೋಲಾರ ತಾಲೂಕಿನ ವಿಟ್ಟಪ್ಪನಹಳ್ಳಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು, ಗ್ರಾಮದಿಂದ ಹೊರ ಕಳುಹಿಸಿದ ಘಟನೆ ಗುರುವಾರ ನಡೆಯಿತು.

ವಿಟ್ಟಪ್ಪನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕೋಲಾರ ತಾಲೂಕು ಸಹಾಯಕ ಕಾರ್ಯಪಾಲಕ ಅಭಿಯಂತರ ಜಬೀವುಲ್ಲಾ, ಇಂಜಿನಿಯರ್ ಅರವಿಂದ್ ಹಾಗೂ ಜೆಎಂಸಿ ಕನ್ ಸ್ಟ್ರಕ್ಷನ್ ನ ಗುತ್ತಿಗೆದಾರರನ್ನು ಗ್ರಾಮಸ್ಥರು ಅಡ್ಡಗಟ್ಟಿ ಕಳಪೆ ಕಾಮಗಾರಿಯನ್ನು ಪ್ರಶ್ನಿಸಿ, ಕಾಮಗಾರಿಯ ಆಗಿರುವ ಲೋಪಗಳನ್ನು ನೇರವಾಗಿ ತೋರಿಸಿ ತರಾಟೆಗೆ ತೆಗೆದುಕೊಂಡರು. ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಜಾರಿಗೆ ತರಲಾದ ಯೋಜನೆಯೇ ಕಳಪೆ ನಿರ್ವಹಣೆಯಿಂದ ಜನರಿಗೆ ತೊಂದರೆ ಉಂಟುಮಾಡುತ್ತಿದೆ ಎಂಬ ಆಕ್ರೋಶ ವ್ಯಕ್ತವಾಯಿತು.

ವಿಟ್ಟಪ್ಪನಹಳ್ಳಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ಕಳಪೆಯಾಗಿರುವುದನ್ನು ಕಂಡ ಗ್ರಾಮಸ್ಥರು ಕೆಲವು ದಿನಗಳ ಹಿಂದೆ ಕೆಲಸವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು. ಅಂದಾಜುಪಟ್ಟಿ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ, ಬಳಕೆ ಮಾಡಲಾಗುತ್ತಿರುವ ಪೈಪ್ಗಳು ಮತ್ತು ಇತರೆ ಸಾಮಗ್ರಿಗಳು ತೀರಾ ಕಳಪೆ ಗುಣಮಟ್ಟದ್ದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಇದರ ನಡುವೆ, ಕೆಲಸವನ್ನು ತಡೆದ ಹಿನ್ನಲೆಯಲ್ಲಿ ಗುತ್ತಿಗೆದಾರರು ಗ್ರಾಮಸ್ಥರಿಗೆ, ವಿಶೇಷವಾಗಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಎಂಪಿಸಿಎಸ್ ಅಧ್ಯಕ್ಷ ವಿ.ಆರ್. ಮಂಜುನಾಥ್ ಅವರಿಗೆ ಧಮ್ಕಿ, ಕೊಲೆ ಬೆದರಿಕೆ ಹಾಕಿದ ಆರೋಪವೂ ಕೇಳಿಬಂದಿದೆ. ಈ ಕುರಿತು ಗ್ರಾಮಸ್ಥರು ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ದೂರು ಸಲ್ಲಿಸಿದ್ದರು.

ದೂರಿನ ಹಿನ್ನಲೆಯಲ್ಲಿ ಎಇಇ ಜಬೀವುಲ್ಲಾ ವಿಟ್ಟಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ಅವರೊಂದಿಗೆ ಇಂಜಿನಿಯರ್ ಅರವಿಂದ್, ಗುತ್ತಿಗೆದಾರರು ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ಕೂಡ ಆಗಮಿಸಿದ್ದರು. ಆದರೆ ಸ್ಥಳಕ್ಕೆ ಬಂದ ಕೂಡಲೇ ಕಾಮಗಾರಿ ಪರಿಶೀಲನೆ ನಡೆಸದೆ ರಾಜಿಗೆ ಮುಂದಾದ ಇಂಜಿನಿಯರ್ ವಿರುದ್ಧ ಗ್ರಾಮದ ಯುವಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪರಿಶೀಲನೆ ನಡೆಸದೆ ಸಮಸ್ಯೆಯನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಗ್ರಾಮ ಯುವಕರು ಆರೋಪಿಸಿ, ಬಂದಿದ್ದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಅಂದಾಜುಪಟ್ಟಿಯ ಪ್ರಕಾರವೇ ಕಾಮಗಾರಿ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ವಿಟ್ಟಪ್ಪನಹಳ್ಳಿ ಗ್ರಾಮಸ್ಥರ ತೀವ್ರ ಒತ್ತಡಕ್ಕೆ ಮಣಿದ ಎಇಇ ಜಬೀವುಲ್ಲಾ ಕೊನೆಗೂ ಸ್ಥಳದಲ್ಲೇ ಕಾಮಗಾರಿ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ ಕಳಪೆ ಕಾಮಗಾರಿ ಮಾಡಿರುವುದು ಕಂಡು ಬಂದಿತು. ಇದರಿಂದ ಸ್ಥಳದಲ್ಲೇ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಕೂಡಾ ನಡೆಯಿತು.

ಯೋಜನೆಯ ನಿಯಮಾನುಸಾರ ಪೈಪ್ಲೈನ್ ಅಳವಡಿಕೆಗೆ ಕನಿಷ್ಠ ಮೂರು ಅಡಿ ಆಳದಲ್ಲಿ ಗುಂಡಿ ತೋಡಬೇಕು. ಆದರೆ ಗ್ರಾಮದಲ್ಲಿ ಅನೇಕ ಕಡೆ ಕೇವಲ ೧, ೧.೫ ಅಡಿ ಆಳದಲ್ಲೇ ಪೈಪ್ಗಳನ್ನು ಹಾಕಿ ಮುಚ್ಚಲಾಗಿದೆ ಎಂಬುದು ಬೆಳಕಿಗೆ ಬಂದಿರುವುದರ ಜೊತೆಗೆ ಕಳಪೆ ಕಾಮಗಾರಿಯೂ ಕಂಡು ಬಂದಿತು. ಇದೇ ವೇಳೆ, ಯೋಜನೆಗೆ ಬಳಸಲಾಗಿರುವ ಪೈಪ್ಗಳ ಗುಣಮಟ್ಟವೂ ತೀರಾ ಕಳಪೆಯಾಗಿರುವುದು ಕಂಡು ಬಂದಿದ್ದು ಅಲ್ಲದೆ, ಎರಡುಮೂರು ವರ್ಷಗಳಲ್ಲೇ ನಾಶವಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆರೋಪಿಸಿದರು. ಜೆಜೆಎಂ ಯೋಜನೆಯಡಿ ಅಳವಡಿಸುವ ಪೈಪ್ಗಳು ಕನಿಷ್ಠ ೩೫ ವರ್ಷಗಳ ಕಾಲ ಬಾಳಿಕೆ ಬರುವಂತಿರಬೇಕು ಎಂಬ ನಿಯಮವಿದ್ದರೂ, ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಆರೋಪಿಸಿದರು.

ಗ್ರಾಮದಲ್ಲಿ ನಿರ್ಮಾಣವಾಗಿರುವ ಓವರ್ಹೆಡ್ ಟ್ಯಾಂಕ್ ಕೂಡ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಗ್ರಾಮಸ್ಥರು ದೂರಿದರು. ಟ್ಯಾಪ್ ಅಳವಡಿಸಲು ಹಾಕಲಾದ ಸಿಮೆಂಟ್ ಕಂಬಗಳು ಹಾಗೂ ಫೌಂಡೇಶನ್ ಬಹಳ ಕಳಪೆಯಾಗಿದ್ದು, ನೀರು ಬರುವ ಮುನ್ನವೇ ಕೆಲವು ಕಡೆ ಮುರಿದು ಬೀಳುವ ಸ್ಥಿತಿ ನಿರ್ಮಾಣವಾಗಿದೆ ಅಂತಾ ಸ್ಥಳದಲ್ಲಿಯೇ ಇದ್ದ ಆಕ್ರೋಶ ಹೊರಹಾಕಿದರು.

ಜಲ ಜೀವನ್ ಮೀಷನ್ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ ಎಂಬ ಗಂಭೀರ ಆರೋಪವೂ ಗ್ರಾಮಸ್ಥರು ಮಾಡಿದರು. ಇದರಿಂದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಅಕ್ರಮಗಳಿಗೆ ಅವಕಾಶ ಮಾಡಿದಂತೆ ಅಂತಾನೂ ಆಕ್ರೋಶ ವ್ಯಕ್ತಪಡಿಸಿದರು.

ಎಇಇ ಜಬೀವುಲ್ಲಾ ನಡೆಸಿದ ಪರಿಶೀಲನೆ ಗ್ರಾಮಸ್ಥರಿಗೆ ಸಮಾಧಾನ ತಂದಿಲ್ಲ. ಇದು ಕೇವಲ ತೋರಿಕೆಯ ಪರಿಶೀಲನೆ. ಮೇಲ್ಮಟ್ಟದ ಅಧಿಕಾರಿಗಳು ಬಂದು ಸಂಪೂರ್ಣ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಸ್ವತಃ ಗ್ರಾಮಕ್ಕೆ ಬಂದು ಕಾಮಗಾರಿ ಪರಿಶೀಲನೆ ನಡೆಸುವ ತನಕ ಯಾವುದೇ ಕೆಲಸ ಮುಂದುವರಿಸಬಾರದು ಎಂದು ಗ್ರಾಮಸ್ಥರು ಪಟ್ಟುಹಿಡಿದರು. ಈ ಬೇಡಿಕೆಗೆ ಎಇಇ, ಇಂಜಿನಿಯರ್ ಹಾಗೂ ಗುತ್ತಿಗೆದಾರರು ಮಣಿದು ಸ್ಥಳದಿಂದ ವಾಪಸ್ಸಾದರು.

ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವದ ಗುರಿಯನ್ನು ಹೊಂದಿರುವ ಜಲ ಜೀವನ್ ಮಿಷನ್ ಯೋಜನೆ, ಇಂತಹ ಕಳಪೆ ಕಾಮಗಾರಿಗಳಿಂದ ತನ್ನ ಉದ್ದೇಶವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಯೋಜನೆಯ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು.

ಗುತ್ತಿಗೆದಾರರು ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಕಳಪೆ ಕಾಮಗಾರಿಗಳನ್ನು ತಕ್ಷಣ ಸರಿಪಡಿಸಬೇಕು ಹಾಗೂ ಹೊಸದಾಗಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ವಿಟ್ಟಪ್ಪನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿರುವ ಜಲ ಜೀವನ್ ಮಿಷನ್ ಕಾಮಗಾರಿಗಳ ಅವ್ಯವಸ್ಥೆ ಸರ್ಕಾರದ ಯೋಜನೆಗಳ ಜಾರಿಗೆ ಸಂಬAಧಿಸಿದAತೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಮೇಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿಲ್ಲದಿದ್ದರೆ ಗ್ರಾಮಸ್ಥರು ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಹುತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಎಂಪಿಸಿಎಸ್ ಅಧ್ಯಕ್ಷ ವಿ.ಆರ್.ಮಂಜುನಾಥ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕೋಟೆ ನಾರಾಯಣಸ್ವಾಮಿ, ವಿ.ಮುನಿರಾಜು, ನಾರಾಯಣಸ್ವಾಮಿ, ಮನೋಹರ್, ರಾಘವೇಂದ್ರ, ಸಂತೋಷ್, ಶಿವರಾಜ್, ಗುತ್ತಿಗೆದಾರ ನಾರಾಯಣಸ್ವಾಮಿ, ಚಂದ್ರಪ್ಪ, ರಾಜು, ಸುಬ್ಬಣ್ಣ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande