
ಬಾಗಲಕೋಟೆ, 08 ಮೇ (ಹಿ.ಸ.) :
ಆಂಕರ್ : ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಟಂಟಂ, ಟ್ರ್ಯಾಕ್ಟರ್ ಮತ್ತು ಇತರೆ ಗೂಡ್ಸ್ ವಾಹನಗಳಲ್ಲಿ ಅತಿಯಾದ ಶಬ್ದದೊಂದಿಗೆ ಅಶ್ಲೀಲ ಹಾಡುಗಳನ್ನು ಹಾಕಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ವಾಹನಗಳ ವಿರುದ್ಧ ಬಾಗಲಕೋಟೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕಠಿಣ ಸಂದೇಶ ರವಾನಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಮ್ಯೂಸಿಕ್ ಪ್ಲೇಯರ್ ಹಾಗೂ ಧ್ವನಿವರ್ಧಕಗಳನ್ನು ಜೆಸಿಬಿ ಮೂಲಕ ನಾಶಪಡಿಸುವ ಮೂಲಕ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಗರದ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಗಜಾನನ ಸುತಾರ ಅವರ ನೇತೃತ್ವದಲ್ಲಿ ವಿಶೇಷ ದಾಳಿ ನಡೆಸಲಾಯಿತು.
ಈ ವೇಳೆ ಟಂಟಂ, ಟ್ರ್ಯಾಕ್ಟರ್ ಹಾಗೂ ಇತರೆ ಸರಕು ಸಾಗಣೆ ವಾಹನಗಳಲ್ಲಿ ಅತಿಯಾದ ಶಬ್ದದೊಂದಿಗೆ ಹಾಡುಗಳನ್ನು ಹಾಕಿಕೊಂಡು ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಪರಿಶೀಲನೆ ನಡೆಸಲಾಯಿತು. ನಿಯಮ ಉಲ್ಲಂಘನೆ ಮಾಡುತ್ತಿದ್ದ ವಾಹನಗಳಿಂದ ಆಡಿಯೋ ಪ್ಲೇಯರ್, ಸ್ಪೀಕರ್ ಹಾಗೂ ಇತರೆ ಧ್ವನಿವರ್ಧಕ ಉಪಕರಣಗಳನ್ನು ಪೊಲೀಸರು ವಶಕ್ಕೆ ಪಡೆದರು.
ನಂತರ ನಗರದ ವಿದ್ಯಾಗಿರಿ ಕಾಲೇಜು ವೃತ್ತದಲ್ಲಿ ವಶಪಡಿಸಿಕೊಂಡಿದ್ದ ಉಪಕರಣಗಳನ್ನು ಸಾರ್ವಜನಿಕರ ಎದುರೇ ಜೆಸಿಬಿ ಮೂಲಕ ನಾಶಪಡಿಸಲಾಯಿತು. ಈ ದೃಶ್ಯ ಗಮನ ಸೆಳೆಯುವುದರ ಜೊತೆಗೆ ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶವಾಗಿ ಪರಿಣಮಿಸಿತು.
ಕಾರ್ಯಾಚರಣೆ ಕುರಿತು ಮಾತನಾಡಿದ ಡಿವೈಎಸ್ಪಿ ಗಜಾನನ ಸುತಾರ ಅವರು, “ವಾಹನಗಳಲ್ಲಿ ಜೋರಾಗಿ ಹಾಡು ಹಾಕಿಕೊಂಡು ಸಂಚರಿಸುವುದರಿಂದ ಚಾಲಕರ ಗಮನ ವಾಹನ ಚಾಲನೆಯಿಂದ ಬೇರೆಡೆ ತಿರುಗುತ್ತದೆ. ಇದರಿಂದ ರಸ್ತೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಜೊತೆಗೆ ಸಾರ್ವಜನಿಕ ಶಾಂತಿ ಭಂಗವಾಗುತ್ತದೆ. ವಿಶೇಷವಾಗಿ ಅಶ್ಲೀಲ ಹಾಡುಗಳು ಮತ್ತು ಕರ್ಕಶ ಧ್ವನಿಯಿಂದ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ವಯೋವೃದ್ಧರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ,” ಎಂದು ಹೇಳಿದರು.
ಇನ್ನೂ ಮುಂದುವರೆದು ಮಾತನಾಡಿದ ಅವರು, “ಮುಂದಿನ ದಿನಗಳಲ್ಲಿಯೂ ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ. ಯಾವುದೇ ವಾಹನಗಳಲ್ಲಿ ಅನಗತ್ಯ ಕರ್ಕಶ ಧ್ವನಿ ಉಂಟುಮಾಡುವ ಧ್ವನಿವರ್ಧಕಗಳು ಅಥವಾ ಅಶ್ಲೀಲ ಹಾಡುಗಳನ್ನು ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ರಸ್ತೆ ಸುರಕ್ಷತೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಾಚರಣೆಗಳು ಅಗತ್ಯವೆಂದು ಅಭಿಪ್ರಾಯ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande