ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನದ ಹೊಸ ದಿಗಂತ : ಸಚಿವ ಭೋಸರಾಜು
ಬೆಂಗಳೂರು, 08 ಮೇ (ಹಿ.ಸ.) : ಆ್ಯಂಕರ್ : ಉತ್ತರ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ ಹಾಗೂ ವೈಜ್ಞಾನಿಕ ಚಿಂತನೆ ಬೆಳೆಸುವ ಉದ್ದೇಶದಿಂದ ರೂಪುಗೊಂಡಿರುವ ಧಾರವಾಡ ಡಿಜಿಟಲ್ ತಾರಾಲಯ ಯೋಜನೆಗೆ ರಾಜ್ಯ ಸರ್ಕಾರ ಮರುಜೀವ ನೀಡಿದೆ. ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣ
File photo


ಬೆಂಗಳೂರು, 08 ಮೇ (ಹಿ.ಸ.) :

ಆ್ಯಂಕರ್ : ಉತ್ತರ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ ಹಾಗೂ ವೈಜ್ಞಾನಿಕ ಚಿಂತನೆ ಬೆಳೆಸುವ ಉದ್ದೇಶದಿಂದ ರೂಪುಗೊಂಡಿರುವ ಧಾರವಾಡ ಡಿಜಿಟಲ್ ತಾರಾಲಯ ಯೋಜನೆಗೆ ರಾಜ್ಯ ಸರ್ಕಾರ ಮರುಜೀವ ನೀಡಿದೆ.

ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಅತ್ಯಾಧುನಿಕ 2D 4K ಡಿಜಿಟಲ್ ತಾರಾಲಯ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಸಚಿವರು, ಈ ಯೋಜನೆಗಾಗಿ 2017ರಲ್ಲಿ ಸರ್ಕಾರವು ಒಟ್ಟು ರೂ.22 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಿತ್ತು ಎಂದು ಹೇಳಿದ್ದಾರೆ.

ಆರಂಭಿಕ ಯೋಜನೆಯ ಪ್ರಕಾರ 15 ಮೀಟರ್ ಸುತ್ತಳತೆಯ 3D 8K ತಾರಾಲಯ ನಿರ್ಮಾಣ ಮಾಡಬೇಕಾಗಿತ್ತು. ಅದರ ಭಾಗವಾಗಿ ಕಟ್ಟಡ ನಿರ್ಮಾಣ, ಸೆಪ್ಟಿಕ್ ಟ್ಯಾಂಕ್, ಫಾಲ್ಸ್ ಸೀಲಿಂಗ್ ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳಿಗೆ ಈಗಾಗಲೇ ರೂ.9.31 ಕೋಟಿ ವೆಚ್ಚ ಮಾಡಲಾಗಿದ್ದು, ಬಹುತೇಕ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ವಿವರಿಸಿದ್ದಾರೆ.

ಆದರೆ ಕೋವಿಡ್-19 ಮಹಾಮಾರಿ ನಂತರ ತಾರಾಲಯಕ್ಕೆ ಅಗತ್ಯವಿರುವ ಡಿಜಿಟಲ್ ಉಪಕರಣಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಕೇವಲ ಉಪಕರಣಗಳ ಖರೀದಿಗೆ ಮಾತ್ರವೇ ಸುಮಾರು ರೂ.29.5 ಕೋಟಿ ಅಗತ್ಯವಿದೆ ಎಂಬ ಅಂದಾಜು ವ್ಯಕ್ತವಾಗಿತ್ತು. ಇದರಿಂದಾಗಿ ಯೋಜನೆಗೆ ಆರ್ಥಿಕ ಅಡೆತಡೆ ಉಂಟಾಗಿ 2020ರಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು.

ಪರಿಷ್ಕೃತ ಯೋಜನೆಗೆ ಹಸಿರು ನಿಶಾನೆ

ಯೋಜನೆ ವಿಳಂಬವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಹೊಸ ಪರಿಷ್ಕೃತ ಯೋಜನೆ ರೂಪಿಸಿದೆ. ಅದರಂತೆ ಲಭ್ಯವಿರುವ ಉಳಿಕೆ ಅನುದಾನವಾದ ರೂ.12.69 ಕೋಟಿಯಲ್ಲೇ ಅತ್ಯಾಧುನಿಕ 2D 4K ಪ್ರೊಜೆಕ್ಷನ್ ವ್ಯವಸ್ಥೆ, ಡೋಮ್, ಸಾಫ್ಟ್ವೇರ್ ಹಾಗೂ ಆಡಿಯೋ ವ್ಯವಸ್ಥೆ ಅಳವಡಿಸಲು ತೀರ್ಮಾನಿಸಲಾಗಿದೆ.

ಈ ಪರಿಷ್ಕೃತ ಪ್ರಸ್ತಾವನೆಗೆ ಹಣಕಾಸು ಇಲಾಖೆ ಹಾಗೂ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಮೂಲಕ ಶೀಘ್ರದಲ್ಲೇ ಉಪಕರಣಗಳ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ವಿಜ್ಞಾನಾಭಿರುಚಿ ಬೆಳೆಸುವ ಕೇಂದ್ರ

ಧಾರವಾಡದಲ್ಲಿ ನಿರ್ಮಾಣವಾಗಲಿರುವ ಈ ಡಿಜಿಟಲ್ ತಾರಾಲಯವು ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ, ಖಗೋಳಶಾಸ್ತ್ರ ಹಾಗೂ ಅಂತರಿಕ್ಷ ಅಧ್ಯಯನದ ಕುರಿತು ನೇರ ಅನುಭವ ನೀಡುವ ಪ್ರಮುಖ ಕೇಂದ್ರವಾಗಲಿದೆ. ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಇದು ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಇದೆ.

ಸಚಿವರ ಅಭಿಪ್ರಾಯ

“ಕೋವಿಡ್ ಪರಿಸ್ಥಿತಿ ಹಾಗೂ ಉಪಕರಣಗಳ ಬೆಲೆ ಏರಿಕೆಯಿಂದಾಗಿ ಯೋಜನೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಣದ ಹೊಸ ಅವಕಾಶ ಕಲ್ಪಿಸುವ ಉದ್ದೇಶದಿಂದ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗದಂತೆ ಲಭ್ಯವಿರುವ ಅನುದಾನದಲ್ಲೇ ಅತ್ಯಾಧುನಿಕ 2D 4K ತಾರಾಲಯ ನಿರ್ಮಾಣಕ್ಕೆ ಅನುಮೋದನೆ ಪಡೆಯಲಾಗಿದೆ. ಉಳಿದ ಕಾಮಗಾರಿ ಹಾಗೂ ಉಪಕರಣಗಳ ಅಳವಡಿಕೆಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸಮರ್ಪಿಸಲಾಗುವುದು,” ಎಂದು ಸಚಿವ ಎನ್.ಎಸ್. ಭೋಸರಾಜು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande