
ಬಾಗಲಕೋಟೆ, 08 ಮೇ (ಹಿ.ಸ.) :
ಆಂಕರ್ : ಸಾರ್ವಜನಿಕರಿಂದ ಬಂದ ಅನೇಕ ದೂರುಗಳ ಹಿನ್ನೆಲೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬಾಗಲಕೋಟೆ ಜಿಲ್ಲೆಯ ಹುನಗುಂದ್ ಪುರಸಭೆ ಕಚೇರಿಯ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಇ-ಸ್ವತ್ತು, ಎನ್ಒಸಿ ಹಾಗೂ ಕಟ್ಟಡ ಅನುಮತಿ ಪ್ರಕ್ರಿಯೆಗಳಲ್ಲಿ ವಿಳಂಬ, ಅಕ್ರಮ ಹಣ ವಸೂಲಿ, ದಾಖಲೆ ತಿದ್ದುಪಡಿ ಹಾಗೂ ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅಚ್ಚರಿ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.
ಬೆಳಿಗ್ಗೆ ಕಚೇರಿಗೆ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳ ತಂಡ ಪುರಸಭೆಯ ವಿವಿಧ ವಿಭಾಗಗಳ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿತು. ಇ-ಸ್ವತ್ತು ವರ್ಗಾವಣೆ ಅರ್ಜಿಗಳು, ಕಟ್ಟಡ ಪರವಾನಗಿ ಕಡತಗಳು, ಎನ್ಒಸಿ ಮಂಜೂರಾತಿ ಪ್ರಕ್ರಿಯೆಗಳು ಹಾಗೂ ನಾಗರಿಕರಿಂದ ಸಲ್ಲಿಸಲಾದ ಅರ್ಜಿಗಳ ನಿರ್ವಹಣೆ ಕುರಿತು ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಹಲವು ಕಡತಗಳಲ್ಲಿ ವಿಳಂಬವಾಗಿರುವುದು ಹಾಗೂ ಕೆಲವು ದಾಖಲೆಗಳಲ್ಲಿ ಅನುಮಾನಾಸ್ಪದ ಮಾಹಿತಿ ಕಂಡುಬಂದಿರುವ ಬಗ್ಗೆ ಮೂಲಗಳು ತಿಳಿಸಿವೆ. ಸಾರ್ವಜನಿಕರಿಂದ ದಾಖಲೆಗಳ ಹೆಸರಿನಲ್ಲಿ ಅನಗತ್ಯ ಹಣ ಕೇಳಲಾಗುತ್ತಿದೆ ಎಂಬ ದೂರುಗಳನ್ನೂ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ದಾಳಿ ವೇಳೆ ಕಚೇರಿಯ ಸಿಬ್ಬಂದಿಯಿಂದ ಮಾಹಿತಿ ಪಡೆದು ಹಲವು ದಾಖಲೆಗಳ ಪ್ರತಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಸಂಗ್ರಹಿಸಿದರು. ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪ್ರಾಥಮಿಕವಾಗಿ ವಿಚಾರಣೆಗೊಳಪಡಿಸಿದ್ದು, ಅಗತ್ಯವಿದ್ದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ತನಿಖೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತ ದಾಳಿ ಸುದ್ದಿಯಿಂದ ಪುರಸಭೆ ಕಚೇರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಮ್ಮ ಕೆಲಸಗಳಿಗಾಗಿ ಬಂದಿದ್ದ ಸಾರ್ವಜನಿಕರು ಕೂಡ ಅಧಿಕಾರಿಗಳ ಪರಿಶೀಲನೆ ಕಾರ್ಯವನ್ನು ಕುತೂಹಲದಿಂದ ವೀಕ್ಷಿಸಿದರು.
ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಲೋಕಾಯುಕ್ತ ಇಲಾಖೆಯ ಉದ್ದೇಶವಾಗಿದ್ದು, ಸಾರ್ವಜನಿಕರಿಂದ ಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಪುರಸಭೆ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಶಿಸ್ತು ಕಾಪಾಡಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದು, ದೂರುಗಳಲ್ಲಿ ಸತ್ಯಾಂಶ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande