
ಬಾಗಲಕೋಟೆ, 08 ಮೇ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ಬನಶಂಕರಿಯಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಅಖಿಲ ಭಾರತ ದೇವಾಂಗ(ನೇಕಾರ) ಜಾಗೃತಿ ಸಮಾವೇಶ–೨೦೨೬, ಶ್ರೀ ದಯಾನಂದ ಪುರಿ ಮಹಾಸ್ವಾಮಿಜಿಯವರ ೩೬ನೇ ವರ್ಷದ ಪಟ್ಟಾಭಿಷೇಕ ಹಾಗೂ ತುಲಾಭಾರ ಸಮಾರಂಭಕ್ಕೆ ಭರದ ಸಿದ್ಧತೆಗಳು ಪೂರ್ಣಗೊಂಡಿವೆ.
ಸಮಾರಂಭಕ್ಕೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ದೇವಾಂಗ ಸಮಾಜದ ಬಾಂಧವರು ಆಗಮಿಸುವ ನಿರೀಕ್ಷೆಯಿದ್ದು, ಈಗಾಗಲೇ ಸ್ಥಳದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ಕಾರ್ಯಕ್ರಮಕ್ಕಾಗಿ ಬನಶಂಕರಿ ಸಮೀಪದ ವಿಶಾಲ ಜಾಗದಲ್ಲಿ ೨೪೦×೪೨೦ ಅಡಿ ವ್ಯಾಪ್ತಿಯ ಭವ್ಯ ಪೆಂಡಾಲ್ ನಿರ್ಮಿಸಲಾಗಿದ್ದು, ಸುಮಾರು ೬೦ ರಿಂದ ೭೦ ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಭಾಗವಹಿಸುವ ಎಲ್ಲರಿಗೂ ಉಪಹಾರ, ಊಟ ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದು ಅಖಿಲ ಭಾರತ ದೇವಾಂಗ(ನೇಕಾರ) ಜಾಗೃತಿ ಸಮಾವೇಶ ಸಮಿತಿಯ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಾಂಗ ಸಮಾಜದ ಸಂಘಟನೆ, ರಾಜಕೀಯ ಜಾಗೃತಿ, ಸಾಮಾಜಿಕ ಒಗ್ಗಟ್ಟು ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಈ ಸಮಾವೇಶ ಮಹತ್ವದ ವೇದಿಕೆಯಾಗಲಿದೆ ಎಂದು ತಿಳಿಸಿದರು. ಸಮಾಜದ ಎಲ್ಲ ವರ್ಗದ ಜನರು ಒಂದಾಗಿ ಸಂಘಟಿತರಾಗಿ ಮುಂದಿನ ಪೀಳಿಗೆಗೆ ಬಲವಾದ ಅಸ್ತಿತ್ವ ನಿರ್ಮಿಸಬೇಕೆಂಬ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ ಎಂದರು.
ಇಂದು ಶುಕ್ರವಾರ ಬೆಳಿಗ್ಗೆ ೫ ಗಂಟೆಗೆ ಶ್ರೀ ಬನಶಂಕರಿದೇವಿಗೆ ವಿಶೇಷ ಅಭಿಷೇಕ ನಡೆಯಲಿದ್ದು, ಬೆಳಿಗ್ಗೆ ೬ ಗಂಟೆಗೆ ಸಣ್ಣಕ್ಕಿ ಬಾಗೂರು ಶ್ರೀ ಬನಶಂಕರಿದೇವಿ ಉತ್ಸವ ಮೂರ್ತಿಯ ಆಹ್ವಾನದೊಂದಿಗೆ ಶ್ರೀ ಚೌಡೇಶ್ವರಿ ದೇವಿಯ ಕತ್ತಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಈ ಧಾರ್ಮಿಕ ಕಾರ್ಯಕ್ರಮವನ್ನು ಸಂಸದ ಪಿ.ಸಿ. ಗದ್ದಿಗೌಡರ ಹಾಗೂ ಶಾಸಕ ಭೀಮಸೇನ ಚಿಮ್ಮನಕಟ್ಟಿ ಉದ್ಘಾಟಿಸಿದರು.
ಮಧ್ಯಾಹ್ನ ೧೨ ಗಂಟೆಯಿಂದ ಮುಖ್ಯ ವೇದಿಕೆ ಕಾರ್ಯಕ್ರಮಗಳು ಆರಂಭವಾಗಲಿದ್ದು, ಹಂಪಿ ಹೇಮಕೂಟದ ದಯಾನಂದ ಪುರಿ ಮಹಾಸ್ವಾಮಿಗಳು ಸೇರಿದಂತೆ ಬಸವರಾಜ ಪಟ್ಟದಾರ್ಯ ಶ್ರೀಗಳು ಹಾಗೂ ಒಟ್ಟು ಆರು ಜನ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದರು.
ಕಾರ್ಯಕ್ರಮವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಲಿದ್ದು, ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಚನಕಾರ ಶ್ರೀ ದೇವರದಾಸಿಮಯ್ಯನವರ ಇಂಗ್ಲೀಷ್ ವಚನಗಳ ಕೃತಿ ಬಿಡುಗಡೆ ಮಾಡಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ದಾಸೋಹ ಭವನದ ೧ ಮತ್ತು ೨ನೇ ಮಹಡಿಯನ್ನು ಉದ್ಘಾಟಿಸಿದರು.
ಸಂಸದರಾದ ಜಗದೀಶ ಶೆಟ್ಟರ ಹಾಗೂ ಬಸವರಾಜ ಬೊಮ್ಮಾಯಿ ಅವರು ದಾನಿಗಳನ್ನು ಸನ್ಮಾನಿಸಲಿದ್ದು, ರಾಜ್ಯಸಭಾ ಸದಸ್ಯ ಕೆ. ನಾರಾಯಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಲಿರುವ ಈ ಸಮಾವೇಶ ರಾಜ್ಯದ ಗಮನ ಸೆಳೆಯುತ್ತಿದೆ.
ಈ ಸಂದರ್ಭದಲ್ಲಿ ಹಂಪಿ ಹೇಮಕೂಟದ ದಯಾನಂದ ಪುರಿ ಮಹಾಸ್ವಾಮಿಗಳು, ಮುಖಂಡರಾದ ಸಿ.ಎಲ್. ಧನಪಾಲ್, ಟಿ. ರಾಜೇಶ, ಎಚ್. ಪರಮೇಶ್ವರಪ್ಪ, ಕೆ.ಸಿ. ತಿಮ್ಮಶೆಟ್ಟಿ, ಸಂಕಣ್ಣ ಕರಡಿಗುಡ್ಡ, ಟಿ.ಆರ್. ಉಮಾಪತಿ, ಚುಡಾಮಣಿ ಕೇಶವಮೂರ್ತಿ, ಕುಮಾರ ಶೇಬಿನಕಟ್ಟಿ, ಮಹೇಶ ಶೇಬಿನಕಟ್ಟಿ, ಗವಿರಂಗಯ್ಯ, ಶ್ರೀಧರ ದೇವಾಂಗ, ಸತೀಶ ಸಪ್ಪರದ, ಭಾರತಿ ರಮೇಶ, ಉಮೇಶ ಕಂದಗಲ್, ದಿನೇಶ ಗಿಡ್ನಂದಿ, ಆರ್.ಜೆ. ರಾಮದುರ್ಗ, ರವಿ ಬಳಿಗೇರ, ಬಸವರಾಜ ಕುದರಿ, ಹೇಮಾದ್ರೆಪ್ಪ ಕೊಪ್ಪಳ, ಬಸವರಾಜ ವಡ್ಡೊಡಗಿ, ಟಿ.ಎಂ. ಜಲೇಂಧ್ರ, ನಾಗಪ್ಪ ಭಾವಿಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande