ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರೈತನ ಆತ್ಮಹತ್ಯೆ ಯತ್ನ ; ಜಮೀನಿನಲ್ಲಿ ವಿದ್ಯುತ್ ಕಂಬ ಅಳವಡಿಕೆ ವಿರೋಧಿಸಿ ಅಧಿಕಾರಿಗಳ ಎದುರೇ ಕ್ರಿಮಿನಾಶಕ ಸೇವನೆ
ವಿಜಯಪುರ, 08 ಮೇ (ಹಿ.ಸ.) : ಆಂಕರ್ : ಜಮೀನಿನಲ್ಲಿ ವಿದ್ಯುತ್ ಕಂಬ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದ ರೈತನೊಬ್ಬ ಅಧಿಕಾರಿಗಳು ಹಾಗೂ ಪೊಲೀಸರ ಎದುರೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಳೇವಾಡ ಗ್ರಾಮದಲ
ಘಟನೆ


ವಿಜಯಪುರ, 08 ಮೇ (ಹಿ.ಸ.) :

ಆಂಕರ್ : ಜಮೀನಿನಲ್ಲಿ ವಿದ್ಯುತ್ ಕಂಬ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದ ರೈತನೊಬ್ಬ ಅಧಿಕಾರಿಗಳು ಹಾಗೂ ಪೊಲೀಸರ ಎದುರೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಳೇವಾಡ ಗ್ರಾಮದಲ್ಲಿ ನಡೆದಿದ್ದು, ಘಟನೆ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಳೇವಾಡ ಗ್ರಾಮದ ರೈತ ಮಲ್ಲನಗೌಡ ಹನುಮಂತಗೌಡ ಬಿರಾದಾರ (44) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಗಂಭೀರ ಸ್ಥಿತಿಯಲ್ಲಿ ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಜಿಲ್ಲೆಯ ಕೂಡಗಿ ಎನ್ಟಿಪಿಸಿಯಿಂದ ಸೊಲ್ಲಾಪುರ ಭಾಗಕ್ಕೆ ವಿದ್ಯುತ್ ಪೂರೈಕೆಗಾಗಿ ಹೈಟೆನ್ಷನ್ ವಿದ್ಯುತ್ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಕಾಮಗಾರಿಯ ಭಾಗವಾಗಿ ರೈತರ ಜಮೀನುಗಳಲ್ಲಿ ವಿದ್ಯುತ್ ಕಂಬ ಅಳವಡಿಸುವ ಕಾರ್ಯವನ್ನು ಡಬ್ಲ್ಯುಆರ್ಎಸ್ ಕಂಪನಿ ಕೈಗೊಂಡಿದೆ.

ಇದೇ ಸಂಬಂಧ ಮಲ್ಲನಗೌಡ ಬಿರಾದಾರ ಅವರ ಜಮೀನಿನಲ್ಲಿ ವಿದ್ಯುತ್ ಕಂಬ ಅಳವಡಿಸಲು ಸ್ಥಳ ಪರಿಶೀಲನೆ ನಡೆಸಲು ಕಂಪನಿ ಅಧಿಕಾರಿಗಳು ಪೊಲೀಸರೊಂದಿಗೆ ಆಗಮಿಸಿದ್ದರು.

ಈ ವೇಳೆ ರೈತ ಮಲ್ಲನಗೌಡ ಬಿರಾದಾರ ತೀವ್ರ ವಿರೋಧ ವ್ಯಕ್ತಪಡಿಸಿ, ವಿದ್ಯುತ್ ಕಂಬ ಅಳವಡಿಕೆಯಿಂದ ಸುಮಾರು 3 ಗುಂಟೆ ಜಮೀನು ಶಾಶ್ವತವಾಗಿ ಹಾನಿಯಾಗಲಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಲಿದ್ದು, ಜೀವನೋಪಾಯಕ್ಕೂ ಸಮಸ್ಯೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಕೇವಲ 15 ಲಕ್ಷ ರೂಪಾಯಿ ಪರಿಹಾರ ನೀಡುವ ಭರವಸೆ ನೀಡಿದ್ದು, ಇದು ಸಮರ್ಪಕವಲ್ಲ. ಕನಿಷ್ಠ 30 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ರೈತ ಪಟ್ಟು ಹಿಡಿದಿದ್ದಾನೆ ಎನ್ನಲಾಗಿದೆ. ಮಾತುಕತೆ ಫಲಕಾರಿಯಾಗದ ಹಿನ್ನೆಲೆ ಮನನೊಂದು ರೈತ ಅಲ್ಲಿಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣವೇ ಪೊಲೀಸರು ಹಾಗೂ ಸ್ಥಳೀಯರು ರೈತನನ್ನು ರಕ್ಷಿಸಿ ವಿಜಯಪುರ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು, ರೈತನ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆ ತಿಳಿದ ತಕ್ಷಣ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೈತನ ಆರೋಗ್ಯ ವಿಚಾರಿಸಿದರು. ಈ ವೇಳೆ ಕಂಪನಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ರೈತರ ಭಾವನೆಗಳಿಗೆ ಬೆಲೆ ಕೊಡದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರ ಜಮೀನು ಸ್ವಾಧೀನ ಅಥವಾ ವಿದ್ಯುತ್ ಕಂಬ ಅಳವಡಿಕೆ ವೇಳೆ ನ್ಯಾಯಸಮ್ಮತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ್ ದಡ್ಡೆ ಆಸ್ಪತ್ರೆಗೆ ಭೇಟಿ ನೀಡಿ ರೈತನ ಆರೋಗ್ಯ ವಿಚಾರಿಸಿ ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಸಮಸ್ಯೆಯನ್ನು ಕಾನೂನುಬದ್ಧವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಈ ಘಟನೆ ಕೂಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande