
ಕೋಲಾರ, ೦೮ ಮೇ (ಹಿ.ಸ) ಆಂಕರ್ :
ಆ್ಯಂಕರ್ : ಅತಿಯಾದ ತಾಪಮಾನದಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗಲಿದ್ದು, ಹೆಚ್ಚು ನೀರು ಕುಡಿಯಿರಿ ಮತ್ತು ಇದೀಗ ಕ್ಷಯ ಮುಕ್ತ ಭಾರತ ಅಭಿಯಾನ ನಡೆಯುತ್ತಿದ್ದು, ರೋಗ ಲಕ್ಷಣಗಳಿದ್ದರೆ ಕಾಲಕಾಲಕ್ಕೆ ತಪಾಸಣೆಗೆ ಒಳಗಾಗಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ವಿಚಾರಣಾಧೀನ ಕೈದಿಗಳಿಗೆ ಕರೆ ನೀಡಿದರು.
ನಗರದ ಉಪ ಬಂದೀಖಾನೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವೇಕಾನಂದ ಯೂತ್ ಮೂಮೆಂಟ್,ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ,ಜಿಲ್ಲಾ ಕಾರಾಗೃಹದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೈದಿಗಳಿಗೆ ಆರೋಗ್ಯ ತಪಾಸಣೆ, ೧೦೦ ದಿನದ ಕ್ಷಯ ಮುಕ್ತ ಭಾರತ ಅಭಿಯಾನ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ನಾಶದಿಂದಾಗಿ ಇಂದು ಇಡೀ ಪ್ರಪಂಚ ತಾಪಮಾನ ಏರಿಕೆಯ ಸಮಸ್ಯೆ ಎದುರಿಸುತ್ತಿದೆ ಎಂದ ಅವರು, ಇದರಿಂದ ಅನೇಕ ಮಾರಕ ರೋಗಗಳು ಮಾತ್ರವಲ್ಲ, ಮನುಷ್ಯನ ದುಡಿಮೆ ಶಕ್ತಿ ಕಡಿಮೆಯಾಗುತ್ತಿದೆ ಎಂದು ತಿಳಿಸಿ, ತಾಪಮಾನ ಏರಿಕೆಯಿಂದಾಗಿ ಹೆಚ್ಚು ನೀರು ಕುಡಿಯಿರಿ. ಕ್ಷಯ ರೋಗದ ಕುರಿತು ಭಯ ಬೇಕಾಗಿಲ್ಲ, ಅದಕ್ಕೆ ಸೂಕ್ತ ಚಿಕಿತ್ಸೆ ಇದ್ದು, ಪೂರ್ಣವಾಗಿ ಗುಣವಾಗಲಿದೆ ಎಂದ ಅವರು, ಕ್ಷಯ ರೋಗದ ಲಕ್ಷಣಗಳ ಕುರಿತು ತಿಳಿಸಿಕೊಟ್ಟು, ಕ್ಷಯ ಮುಕ್ತ ಭಾರತ ಅಭಿಯಾನ ಯಶಸ್ವಿಗೊಳಿಸಲು ಕೋರಿದರು. ಮೂರುವಾರಗಳವರೆಗೂ ಹೆಚ್ಚು ಕಾಲ ಉಳಿಯುವ ದೀರ್ಘಕಾಲದ ಕೆಮ್ಮು, ಕಫದಲ್ಲಿ ರಕ್ತ ಬರುವುದು, ರಾತ್ರಿ ಬೆವರುವುದು, ಹಠಾತ್ ತೂಕ ನಷ್ಟ, ಸತತ ಜ್ವರ ಇವುಗಳ ಜತೆಗೆ ತೀವ್ರ ಆಯಾಸ, ಎದೆ ನೋವು, ಹಸಿವಿನ ಕೊರತೆ, ಉಸಿರಾಟದ ತೊಂದರೆ ಇವು ಕ್ಷಯ ರೋಗದ ಲಕ್ಷಣಗಳಾಗಿದ್ದು, ಈ ಸಮಸ್ಯೆ ಇದ್ದರೆ ಕೂಡಲೇ ತಪಾಸಣೆಗೆ ಒಳಗಾಗಿ ಎಂದು ಸಲಹೆ ನೀಡಿದರು.
ಹೆಚ್ಐವಿ ಮಾರಕ ಏಡ್ಸ್ ಕುರಿತು ಮಾಹಿತಿ ನೀಡಿದ ಅವರು, ರೋಗಿಗಳ ಬಗ್ಗೆ ತಾರತಮ್ಯ ಬೇಡ, ಇದು ಅಂತಹ ರೋಗಿಗಳ ಜತೆಗಿದ್ದರೆ, ಅವರು ಮುಟ್ಟಿದರೆ ಹರಡುವುದಿಲ್ಲ, ಇದು ರಕ್ತದಿಂದ ಮಾತ್ರವೇ ಹರಡುತ್ತದೆ, ಹೆಚ್ಐವಿ ಇರುವ ರೋಗಿಯ ರಕ್ತ ಪಡೆಯುವುದರಿಂದ ಅಂತಹವರೊ0ದಿಗೆ ಲೈಂಗಿಕ ಸಂಪರ್ಕ ಹೊಂದುವುದರಿ0ದ ಮಾತ್ರ ಇದು ಹರಡುತ್ತದೆ ಎಂದ ಅವರು ರೋಗಿಗಳನ್ನು ಕೀಳಿರಿಮೆಯಿಂದ ಕಾಣಬಾರದು ಎಂದರು.
ಜೈಲು ಅಧೀಕ್ಷಕ ಜಿ.ರಾಮುಲು ಮಾತನಾಡಿ, ಬಂದೀಖಾನೆಯಲ್ಲಿ ವಿಚಾರಣಾಧೀನ ಕೈದಿಗಳಿಗಳು ಆರೋಗ್ಯ ಸಮಸ್ಯೆಗಳಿದ್ದರೆ ಕೂಡಲೇ ನಮ್ಮ ಗಮನಕ್ಕೆ ತನ್ನಿ, ನಿಮಗೆ ಉಚಿತ ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು ಎಂದ ಅವರು, ಸ್ವಚ್ಚತೆಗೆ ಹೆಚ್ಚು ಒತ್ತು ನೀಡಿ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಬಂದೀಖಾನೆಯಲ್ಲಿನ ವಿಚಾರಣಾಧೀನ ಕೈದಿಗಳಿಗೆ ಕೋಲಾರ ಗಾಂಧಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದಿ0ದ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡಲಾಯಿತು.
ಜೈಲರ್ ಯಾಸ್ಮೀನ್, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ನ ಕಾರಾಗೃಹ ಯೋಜನಾ ಸಂಯೋಜಕ ಎಸ್.ಬಾಬು,ಗಾಂಧಿನಗರ ವೈದ್ಯಾಧಿಕಾರಿ ಡಾ.ಫೀರ್ಧೋಸ್, ಪ್ರಯೋಗಶಾಲಾ ತಂತ್ರಜ್ಞರಾದ ಸಂಧ್ಯಾ ಮತ್ತು ಸಿಬ್ಬಂದಿ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್