
ಕೋಲಾರ, ಮೇ ೦೮ (ಹಿ.ಸ) :
ಆ್ಯಂಕರ್ : ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಬಾಕಿ ಇರುವ ಭೂ ಸ್ವಾಧೀನ ಹಾಗೂ ವಿವಿಧ ಸಿವಿಲ್ ವ್ಯಾಜ್ಯಗಳ ಪರಿಣಾಮಕಾರಿ ನಿರ್ವಹಣೆಗಾಗಿ ಗುತ್ತಿಗೆ ಆಧಾರದ ಮೇಲೆ ಕಾನೂನು ಸಲಹೆಗಾರರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಭೂ ಸ್ವಾಧೀನ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡುವ ಹೆಚ್ಚುವರಿ ಪರಿಹಾರದ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ಮುನ್ನ ಕಾನೂನು ಅಧಿಕಾರಿಗಳ ಅಭಿಪ್ರಾಯ ಪಡೆಯುವುದು ಮತ್ತು ಆರ್ಥಿಕ ಹೊಣೆಗಾರಿಕೆಯನ್ನು ಲೆಕ್ಕ ಹಾಕುವುದು ಅತ್ಯಗತ್ಯವಾಗಿದೆ. ಜಿಲ್ಲಾಡಳಿತದ ಕಾರ್ಯಬಾಹುಳ್ಯದ ನಡುವೆ ಇಂತಹ ವ್ಯಾಜ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗದಿರುವುದನ್ನು ಮನಗಂಡು ಸರ್ಕಾರವು ಈ ವಿಶೇಷ ಹುದ್ದೆಯನ್ನು ಸೃಜಿಸಿದೆ. ಸರ್ಕಾರದ ಆದೇಶದಂತೆ ಈ ಹುದ್ದೆಯ ಅವಧಿಯು ೦೧/೦೪/೨೦೨೬ ರಿಂದ ೩೧/೦೩/೨೦೨೮ ರವರೆಗೆ ಇರಲಿದೆ.
ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬ0ಧಿಸಿದ0ತೆ ಕಂಡಿಕವಾರು ಉತ್ತರಗಳು ಮತ್ತು ಆಕ್ಷೇಪಣೆಗಳನ್ನು ಸಿದ್ಧಪಡಿಸುವುದು. ದಾಖಲಾತಿಗಳನ್ನು ಕಾನೂನು ರೀತ್ಯಾ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ಸೂಕ್ತ ಸಲಹೆ ನೀಡುವುದು ಸೇರಿದಂತೆ ಜವಾಬ್ದಾರಿಗಳನ್ನು ಹೊರಿಸಲಾಗಿದೆ.
ನೇಮಕಾತಿ ಪಡೆಯುವ ಅಭ್ಯರ್ಥಿಗಳ ಅನುಭವದ ಆಧಾರದ ಮೇಲೆ ಮಾಸಿಕ ಸಂಚಿತ ವೇತನವನ್ನು ನಿಗದಿಪಡಿಸಲಾಗಿದೆ: ನಿವೃತ್ತ ನ್ಯಾಯಾಧೀಶರು ಅಥವಾ ನಿವೃತ್ತ ವಿಶೇಷ ಜಿಲ್ಲಾಧಿಕಾರಿಗಳಿಗೆ: ರೂ. ೭೦,೦೦೦/-. ನಿವೃತ್ತ ತಹಶೀಲ್ದಾರ್ ಅಥವಾ ನಿವೃತ್ತ ಉಪತಹಶೀಲ್ದಾರ್ಗಳಿಗೆ:ರೂ. ೪೦,೦೦೦/-. ಅರ್ಜಿ ಸಲ್ಲಿಸುವ ವಿಧಾನ
ಆಸಕ್ತರು ತಮ್ಮ ಅರ್ಜಿಗಳನ್ನು ಮೇ ೨೭ರ ಸಂಜೆ ೫:೦೦ ಗಂಟೆಯೊಳಗೆ ಸಲ್ಲಿಸಬಹುದು. ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ, ಜಿಲ್ಲಾಡಳಿತ ಭವನ, ಟಮಕ, ಕೋಲಾರ ಇಲ್ಲಿಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಕಳುಹಿಸಬಹುದು.
ಅಂತಿಮ ಆಯ್ಕೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್