
ಧಾರವಾಡ, 07 ಮೇ (ಹಿ.ಸ.):
ಆ್ಯಂಕರ್:ಧಾರವಾಡ ರಂಗಾಯಣದ ನೂತನ ನಿರ್ದೇಶಕರಾಗಿ ಝಕೀರ ನದಾಫ ನೇಮಕಗೊಂಡಿದ್ದು, ಅವರು ಗುರುವಾರ ಅಧಿಕಾರ ಸ್ವೀಕರಿಸಿದ ಬಳಿಕ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಧಾರವಾಡದ ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಂಗಭೂಮಿ, ನಾಟಕ ಹಾಗೂ ಕಲಾ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು. ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ, ರಂಗಭೂಮಿಯತ್ತ ಅವರನ್ನು ಆಕರ್ಷಿಸುವ ಕೆಲಸ ಮಾಡಲಾಗುವುದು ಎಂದರು.
ಧಾರವಾಡದಲ್ಲಿ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವ ಆಯೋಜಿಸುವ ಯೋಜನೆ ರೂಪಿಸಲಾಗಿದೆ. ಜೊತೆಗೆ ಸ್ಥಗಿತಗೊಂಡಿರುವ “ರಂಗಧ್ವನಿ” ಕಾರ್ಯಕ್ರಮವನ್ನು ಮರುಪ್ರಾರಂಭಿಸುವ ಉದ್ದೇಶವೂ ಇದೆ ಎಂದು ಹೇಳಿದರು.
ಬಹುಭಾಷಾ ನಾಟಕೋತ್ಸವಗಳನ್ನು ಆಯೋಜಿಸುವ ಮೂಲಕ ವಿವಿಧ ಭಾಷೆಗಳ ರಂಗಸಂಸ್ಕೃತಿಗೆ ವೇದಿಕೆ ಕಲ್ಪಿಸಲಾಗುವುದು. ಜನರು ಸಿನಿಮಾಗಳಿಗೆ ನೀಡುವ ಬೆಂಬಲದಂತೆಯೇ ರಂಗಭೂಮಿಗೂ ಪ್ರೋತ್ಸಾಹ ನೀಡಿದರೆ, ಕನ್ನಡ ರಂಗಭೂಮಿಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಧಾರವಾಡ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa