ವಿಜಯಪುರಕ್ಕೆ ‘ವಂದೇ ಭಾರತ’ ರೈಲು ಶೀಘ್ರ:ಸಂಸದ ರಮೇಶ ಜಿಗಜಿಣಗಿ
ವಿಜಯಪುರ, 07 ಮೇ (ಹಿ.ಸ.): ಆಂಕರ್ : ಐತಿಹಾಸಿಕ ವಿಜಯಪುರ ಜಿಲ್ಲೆಗೆ ‘ವಂದೇ ಭಾರತ’ ರೈಲು ಸಂಪರ್ಕ ಕಲ್ಪಿಸುವ ಜನರ ಬಹುದಿನದ ಕನಸು ಶೀಘ್ರದಲ್ಲೇ ನನಸಾಗಲಿದ್ದು, ಕೆಲ ತಾಂತ್ರಿಕ ತೊಂದರೆಗಳು ನಿವಾರಣೆಯಾದ ತಕ್ಷಣ ರೈಲು ಸಂಚಾರಕ್ಕೆ ಹಸಿರು ನಿಶಾನೆ ದೊರೆಯಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ರೈಲು


ವಿಜಯಪುರ, 07 ಮೇ (ಹಿ.ಸ.):

ಆಂಕರ್ : ಐತಿಹಾಸಿಕ ವಿಜಯಪುರ ಜಿಲ್ಲೆಗೆ ‘ವಂದೇ ಭಾರತ’ ರೈಲು ಸಂಪರ್ಕ ಕಲ್ಪಿಸುವ ಜನರ ಬಹುದಿನದ ಕನಸು ಶೀಘ್ರದಲ್ಲೇ ನನಸಾಗಲಿದ್ದು, ಕೆಲ ತಾಂತ್ರಿಕ ತೊಂದರೆಗಳು ನಿವಾರಣೆಯಾದ ತಕ್ಷಣ ರೈಲು ಸಂಚಾರಕ್ಕೆ ಹಸಿರು ನಿಶಾನೆ ದೊರೆಯಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.

ಈ ಕುರಿತು ಕೇಂದ್ರ ರೈಲ್ವೆ ಸಚಿವರು ಹಾಗೂ ಸಂಬಂಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಹಲವು ಹಂತಗಳಲ್ಲಿ ಚರ್ಚೆ ನಡೆಸಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದ್ದು, ರೈಲು ಮಾರ್ಗದ ತಾಂತ್ರಿಕ ಕಾಮಗಾರಿಗಳು ಪೂರ್ಣಗೊಂಡ ಬಳಿಕ ವಿಜಯಪುರಕ್ಕೂ ವಂದೇ ಭಾರತ ರೈಲು ಸಂಚಾರ ಆರಂಭವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯಪುರ, ಸೊಲ್ಲಾಪುರ, ಗದಗ ಹಾಗೂ ಹುಬ್ಬಳ್ಳಿ ಭಾಗದ ಜನರು ಹಲವು ವರ್ಷಗಳಿಂದ ವೇಗದ ರೈಲು ಸೇವೆಗೆ ಒತ್ತಾಯ ಮಾಡುತ್ತಿದ್ದರು. ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳು ಮತ್ತು ರೈಲ್ವೆ ಹೋರಾಟಗಾರರು ಹಲವು ಬಾರಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಕೇಂದ್ರ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಲಾಗಿದೆ ಎಂದು ಜಿಗಜಿಣಗಿ ಹೇಳಿದ್ದಾರೆ.

ಕೆಲವರು ವಾಸ್ತವ ಸ್ಥಿತಿಯನ್ನು ಅರಿಯದೇ ರೈಲು ಸೇವೆ ಕುರಿತು ಅನಾವಶ್ಯಕ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಟೀಕೆಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಅಭಿವೃದ್ಧಿ ಕಾರ್ಯಗಳು ಹಂತ ಹಂತವಾಗಿ ನಡೆಯುತ್ತಿದ್ದು, ತಾಂತ್ರಿಕ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಸ್ತುತ ಕಲಬುರಗಿ, ಹುಬ್ಬಳ್ಳಿ ಹಾಗೂ ಬೆಳಗಾವಿ ಮಾರ್ಗಗಳಲ್ಲಿ ವಂದೇ ಭಾರತ ರೈಲು ಯಶಸ್ವಿಯಾಗಿ ಸಂಚರಿಸುತ್ತಿದೆ. ಆದರೆ ಸೊಲ್ಲಾಪುರ–ವಿಜಯಪುರ–ಗದಗ–ಹುಬ್ಬಳ್ಳಿ ಮಾರ್ಗದಲ್ಲಿ ಇನ್ನೂ ಕೆಲವು ಮೂಲಸೌಕರ್ಯ ಹಾಗೂ ಹಳಿ ಸುಧಾರಣಾ ಕಾಮಗಾರಿಗಳು ಪ್ರಗತಿಯಲ್ಲಿವೆ. ಸಾಮಾನ್ಯ ರೈಲುಗಳು ಈಗ 92 ರಿಂದ 100 ಕಿಮೀ ವೇಗದಲ್ಲಿ ಸಂಚರಿಸುತ್ತಿದ್ದರೆ, ವಂದೇ ಭಾರತ ರೈಲುಗಳು 110 ರಿಂದ 140 ಕಿಮೀ ವೇಗದಲ್ಲಿ ಸಂಚರಿಸುತ್ತವೆ. ಈ ಹಿನ್ನೆಲೆಯಲ್ಲಿ ಹಳಿ, ಸಿಗ್ನಲ್ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.

ವಂದೇ ಭಾರತಂತಹ ಅತಿ ವೇಗದ ರೈಲು ಸೇವೆ ಆರಂಭಿಸುವ ಮೊದಲು ಸಂಪೂರ್ಣ ಸುರಕ್ಷತೆ ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಯಾವುದೇ ರೀತಿಯ ಅಪಾಯ ಅಥವಾ ತಾಂತ್ರಿಕ ಸಮಸ್ಯೆ ಎದುರಾಗದಂತೆ ರೈಲ್ವೆ ಇಲಾಖೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದೆ. ಕಾಮಗಾರಿ ಇನ್ನೂ 2 ರಿಂದ 3 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಬಳಿಕ ವಿಜಯಪುರಕ್ಕೂ ವಂದೇ ಭಾರತ ರೈಲು ಸೇವೆ ಆರಂಭವಾಗಲಿದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಂದೇ ಭಾರತ ರೈಲು ಮಹತ್ವದ ಹೆಜ್ಜೆಯಾಗಲಿದೆ. ಇದರಿಂದ ಉದ್ಯಮ, ಪ್ರವಾಸೋದ್ಯಮ, ವ್ಯಾಪಾರ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ. ಜೊತೆಗೆ ಬೆಂಗಳೂರಿನಂತಹ ಮಹಾನಗರಗಳಿಗೆ ವೇಗದ ಸಂಪರ್ಕ ಸಿಗುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ರೀತಿಯ ಅಪಪ್ರಚಾರ ಅಥವಾ ಗೊಂದಲ ಸೃಷ್ಟಿಸುವ ಮಾತುಗಳಿಗೆ ಅವಕಾಶ ನೀಡಬಾರದು. ಸರ್ಕಾರ ಮತ್ತು ರೈಲ್ವೆ ಇಲಾಖೆ ಜನರ ಬೇಡಿಕೆಗೆ ಸ್ಪಂದಿಸಿದ್ದು, ಶೀಘ್ರದಲ್ಲೇ ವಿಜಯಪುರ ಜಿಲ್ಲೆಯ ಜನತೆಗೆ ಸಂತಸದ ಸುದ್ದಿ ದೊರೆಯಲಿದೆ ಎಂದು ರಮೇಶ ಜಿಗಜಿಣಗಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande