ಮಾನವೀಯತೆ, ವಿಶ್ವಬಂಧುತ್ವದ ಸಂದೇಶ ಸಾರಿದ ಮಹಾಕವಿ ಠಾಗೋರ್
ವಿಜಯಪುರ, 07 ಮೇ (ಹಿ.ಸ.): ಆಂಕರ್ : ಭಾರತೀಯ ಸಾಹಿತ್ಯ, ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳಿಗೆ ಹೊಸ ದಿಕ್ಕು ತೋರಿದ ಮಹಾನ್ ಕವಿ ರವೀಂದ್ರನಾಥ ಠಾಗೋರ್ ಅವರ ಜೀವನ ಮತ್ತು ಚಿಂತನೆಗಳು ಇಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿವೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಮಲ
Tyagiir


ವಿಜಯಪುರ, 07 ಮೇ (ಹಿ.ಸ.):

ಆಂಕರ್ : ಭಾರತೀಯ ಸಾಹಿತ್ಯ, ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳಿಗೆ ಹೊಸ ದಿಕ್ಕು ತೋರಿದ ಮಹಾನ್ ಕವಿ ರವೀಂದ್ರನಾಥ ಠಾಗೋರ್ ಅವರ ಜೀವನ ಮತ್ತು ಚಿಂತನೆಗಳು ಇಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿವೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರವೀಂದ್ರನಾಥ ಠಾಗೋರ್ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಠಾಗೋರರ ಜೀವನವು ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರದೆ, ಮಾನವೀಯತೆ, ವಿಶ್ವಬಂಧುತ್ವ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರಿದ ಮಹತ್ತರ ಚಳವಳಿಯಾಗಿದೆ ಎಂದು ತಿಳಿಸಿದರು. “ಜನ ಗಣ ಮನ” ಎಂಬ ರಾಷ್ಟ್ರಗೀತೆ ಮೂಲಕ ಅವರು ಭಾರತದ ಏಕತೆ ಮತ್ತು ಅಖಂಡತೆಯನ್ನು ಜಗತ್ತಿಗೆ ಪರಿಚಯಿಸಿದ್ದು, ಅವರ ಅಂತರಾಷ್ಟ್ರೀಯ ಚಿಂತನೆ ಮತ್ತು ವಿಶ್ವಮಾನವತೆಯ ಪರಿಕಲ್ಪನೆ ಇಂದಿನ ಸಮಾಜಕ್ಕೂ ಅಗತ್ಯವಾಗಿದೆ ಎಂದು ಹೇಳಿದರು.

ಬಾಲ್ಯದಲ್ಲಿಯೇ ಕಲೆ, ಸಂಗೀತ, ಸಾಹಿತ್ಯ ಕ್ಷೇತ್ರಗಳತ್ತ ಅಪಾರ ಆಸಕ್ತಿ ಹೊಂದಿದ್ದ ಠಾಗೋರರು ಶಿಕ್ಷಣವನ್ನು ಕೇವಲ ಪಾಠಪುಸ್ತಕಗಳಿಗೆ ಸೀಮಿತಗೊಳಿಸದೇ, ಬೌದ್ಧಿಕ, ದೈಹಿಕ ಹಾಗೂ ಆಧ್ಯಾತ್ಮಿಕ ವಿಕಸನಕ್ಕೆ ಒತ್ತು ನೀಡಿದರು. ಪ್ರಕೃತಿಯ ಮಡಿಲಲ್ಲಿ ಮಕ್ಕಳಿಗೆ ಸ್ವತಂತ್ರ ಹಾಗೂ ಸೃಜನಾತ್ಮಕ ಕಲಿಕೆಯನ್ನು ನೀಡುವ ಅವರ ಶಿಕ್ಷಣ ತತ್ವಗಳು ಇಂದಿನ ಹೊಸ ಶಿಕ್ಷಣ ನೀತಿಗೂ ಪ್ರೇರಣೆಯಾಗಿವೆ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ ಮಾತನಾಡಿ, ಗ್ರಾಮೀಣ ಬದುಕು, ಕೃಷಿ ಮತ್ತು ಸ್ವಾವಲಂಬನೆಯತ್ತ ವಿಶೇಷ ಕಾಳಜಿ ತೋರಿದ ಠಾಗೋರರು ರೈತರಿಗೆ ಹೊಸ ಕೃಷಿ ಪದ್ಧತಿಗಳನ್ನು ಪರಿಚಯಿಸಿ ಗ್ರಾಮೀಣ ಆರ್ಥಿಕತೆ ಬಲಪಡಿಸಲು ಶ್ರಮಿಸಿದ್ದರು ಎಂದರು.

ಮಾನವೀಯತೆ ಮತ್ತು ಸಾಂಸ್ಕೃತಿಕ ಸಮೃದ್ಧಿಯ ಕನಸು ಕಂಡ ಅವರ ಚಿಂತನೆಗಳು ಇಂದಿನ ಭಾರತದ ಅಭಿವೃದ್ಧಿಗೆ ಮಾರ್ಗದರ್ಶಕವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಮಾತನಾಡಿ, “ಇಡೀ ವಿಶ್ವವೇ ಒಂದು ಕುಟುಂಬ” ಎಂಬ ಸಂದೇಶ ಸಾರಿದ ಠಾಗೋರರ ಚಿಂತನೆಗಳು ಕಾಲಾತೀತವಾಗಿವೆ. ಪ್ರಕೃತಿಯೊಂದಿಗೆ ಬೆರೆತು ಕಲಿಯುವ ಶಿಕ್ಷಣ ವ್ಯವಸ್ಥೆ ಮತ್ತು ಸಮಗ್ರ ಶಿಕ್ಷಣದ ಪರಿಕಲ್ಪನೆಗೆ ಅವರು ಬುನಾದಿ ಹಾಕಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ರೇಣುಕಾ ಭಜಂತ್ರಿ, ಸಂಗೀತಾ ಅಂಕಲಗಿ, ವೀರೇಶ ಹುಣಶ್ಯಾಳ ಸೇರಿದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ಠಾಗೋರರ ಗೀತೆಗಳು ಮತ್ತು ಅವರ ಜೀವನ ಸಂದೇಶ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಬಂದಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande