
ಧಾರವಾಡ, 07 ಮೇ (ಹಿ.ಸ.):
ಆ್ಯಂಕರ್:
ಧಾರವಾಡ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ವತಿಯಿಂದ ವಿಶ್ವ ಭೂ ದಿನಾಚರಣೆಯನ್ನು ಮೇ 6ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ, ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಎಫ್.ಹೆಚ್. ಜಕ್ಕಪ್ಪನವರ ಉದ್ಘಾಟಿಸಿ ಮಾತನಾಡಿ, ನೀರಿನ ಉಳಿತಾಯ ಮತ್ತು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನೀರು ಮಾಲಿನ್ಯ ನಿಯಂತ್ರಣ ಕಾಯ್ದೆ–1974 ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ವಾಲ್ಮಿ ಸಂಸ್ಥೆಯ ಆವರಣ ಮತ್ತು ಅದರ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಅರಿವು ಮೂಡಿಸುವ ಮೂಲಕ ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಸರ್ಕಾರ ಜಾನುವಾರು ಖರೀದಿಗೆ ಶೇ.25ರಷ್ಟು ಸಹಾಯಧನ ನೀಡುತ್ತಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮಣ್ಣು ಮತ್ತು ನೀರಿನ ಸದ್ಬಳಕೆಗೆ ಸಂಬಂಧಿಸಿದ ಹೊಸ ಯೋಜನೆಗಳನ್ನು ವಾಲ್ಮಿ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಿದರೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕೃಷಿ ವಿಶ್ವವಿದ್ಯಾಲಯದ ನಿವೃತ್ತ ವಿದ್ಯಾಧಿಕಾರಿ ಹಾಗೂ ಮಣ್ಣು ವಿಜ್ಞಾನಿ ಡಾ. ವಿ.ಬಿ. ಕುಲಿಗೋಡ ಮಾತನಾಡಿ, ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಮಣ್ಣು ಅವನತಿಯತ್ತ ಸಾಗುತ್ತಿದೆ ಎಂದು ಎಚ್ಚರಿಸಿದರು. ಮಣ್ಣು ಪರೀಕ್ಷೆ ಮತ್ತು ನೀರಿನ ಪರೀಕ್ಷೆ ಆಧರಿಸಿ ಪೋಷಕಾಂಶ ಹಾಗೂ ರಾಸಾಯನಿಕ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಬೋರ್‌ವೆಲ್ ನೀರಿನಲ್ಲಿ ಲವಣಾಂಶ ಹೆಚ್ಚುತ್ತಿರುವುದರಿಂದ ಹಾಗೂ ನೀರು-ಮಣ್ಣಿನ ಅವೈಜ್ಞಾನಿಕ ನಿರ್ವಹಣೆಯಿಂದ ರಾಜ್ಯದಲ್ಲಿ ಸವಳು-ಜವಳು ಸಮಸ್ಯೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿ 80 ಸಾವಿರ ಹೆಕ್ಟೇರ್‌ಗೂ ಅಧಿಕ ಅಚ್ಚುಕಟ್ಟು ಪ್ರದೇಶ ಈ ಸಮಸ್ಯೆಗೆ ಒಳಗಾಗಿದೆ ಎಂದು ಅವರು ತಿಳಿಸಿದರು.
ವಾಲ್ಮಿ ನಿರ್ದೇಶಕ ಡಾ. ಗಿರೀಶ ಎನ್. ಮರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೃಷಿಭೂಮಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಮಣ್ಣು ಮತ್ತು ನೀರಿನ ವೈಜ್ಞಾನಿಕ ನಿರ್ವಹಣೆಯಿಂದ ಕೃಷಿ ಉತ್ಪಾದಕತೆ ಹೆಚ್ಚಿಸಬಹುದು ಎಂದು ಹೇಳಿದರು.
ಏಕಬೆಳೆ ಪದ್ಧತಿಯಿಂದ ಮಣ್ಣಿನ ಫಲವತ್ತತೆ ಕುಂಠಿತವಾಗುತ್ತಿದೆ. ಬೆಳೆ ಬದಲಾವಣೆ ಪದ್ಧತಿ ಅನುಸರಿಸುವುದರಿಂದ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. ರೈತರು ಪಶು ಆಧಾರಿತ, ವೃಕ್ಷ ಆಧಾರಿತ ಹಾಗೂ ಮೌಲ್ಯವರ್ಧಿತ ಕೃಷಿಯತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಗುರುಸಿದ್ದಪ್ಪ, ಬಸವರಾಜ ಮಾಟೊಳ್ಳಿ ಹಾಗೂ ಉದ್ಯಮಿ ವಿಷ್ಣು ಅವರನ್ನು ಸನ್ಮಾನಿಸಲಾಯಿತು.
ನಿರ್ಮಿತಿ ಕೇಂದ್ರದ ಇಂಜಿನಿಯರ್ ಬೈಲಪ್ಪ, ಪ್ರಾಧ್ಯಾಪಕ ಬಿ.ವೈ. ಬಂಡಿವಡ್ಡರ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಲ ಸಂಪನ್ಮೂಲ ಇಲಾಖೆಯ ಅಭಿಯಂತರರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ರೈತರು ಹಾಗೂ ವಾಲ್ಮಿ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa