ರೈತ ವಿರೋಧಿ ಬ್ಯಾಂಕಿಂಗ್ ನಿಯಮ ರದ್ದುಪಡಿಸಲು ರೈತ ಸಂಘಟನೆಗಳ ಆಗ್ರಹ
ಬೆಂಗಳೂರು, 07 ಮೇ (ಹಿ.ಸ.): ಆ್ಯಂಕರ್: ರೈತರು ಮತ್ತು ಬಡ ವರ್ಗದ ಜನರಿಗೆ ಬ್ಯಾಂಕುಗಳಲ್ಲಿ ಚಿನ್ನ ಗಿರವಿ ಇಟ್ಟು ಸಾಲ ಪಡೆಯುವುದು ಕಷ್ಟಕರವಾಗುತ್ತಿರುವ ಹಿನ್ನೆಲೆಯಲ್ಲಿ, ರಿಸರ್ವ್ ಬ್ಯಾಂಕ್ ಜಾರಿಗೆ ತಂದಿರುವ ಹೊಸ ನಿಯಮಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯ
ಮನವಿ


ಬೆಂಗಳೂರು, 07 ಮೇ (ಹಿ.ಸ.):

ಆ್ಯಂಕರ್:

ರೈತರು ಮತ್ತು ಬಡ ವರ್ಗದ ಜನರಿಗೆ ಬ್ಯಾಂಕುಗಳಲ್ಲಿ ಚಿನ್ನ ಗಿರವಿ ಇಟ್ಟು ಸಾಲ ಪಡೆಯುವುದು ಕಷ್ಟಕರವಾಗುತ್ತಿರುವ ಹಿನ್ನೆಲೆಯಲ್ಲಿ, ರಿಸರ್ವ್ ಬ್ಯಾಂಕ್ ಜಾರಿಗೆ ತಂದಿರುವ ಹೊಸ ನಿಯಮಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

ರಿಸರ್ವ್ ಬ್ಯಾಂಕ್‌ನ ಬೆಂಗಳೂರು ವಲಯದ ಡೆಪ್ಯುಟಿ ಮ್ಯಾನೇಜರ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಅವರು, ರೈತರು ಸಂಕಷ್ಟದ ಸಂದರ್ಭದಲ್ಲಿ ಕೃಷಿ ಚಟುವಟಿಕೆ, ಮಕ್ಕಳ ವಿದ್ಯಾಭ್ಯಾಸ, ಮದುವೆ, ಆಸ್ಪತ್ರೆ ವೆಚ್ಚ ಸೇರಿದಂತೆ ತುರ್ತು ಅಗತ್ಯಗಳಿಗಾಗಿ ಬ್ಯಾಂಕುಗಳಲ್ಲಿ ಚಿನ್ನ ಗಿರವಿ ಇಟ್ಟು ಸಾಲ ಪಡೆಯುತ್ತಾರೆ. ಆದರೆ ಹೊಸ ನಿಯಮಗಳಿಂದ ರೈತರು ಬ್ಯಾಂಕುಗಳಿಂದ ದೂರ ಸರಿಯುವಂತಾಗಿದೆ ಎಂದು ದೂರಿದ್ದಾರೆ.

ಚಿನ್ನ ಗಿರವಿ ಸಾಲ ಪಡೆಯಲು ಸಿಬಿಲ್ ಸ್ಕೋರ್, ಪ್ಯಾನ್ ಕಾರ್ಡ್, ಆದಾಯ ದೃಢೀಕರಣ ಪತ್ರ ಹಾಗೂ ಬ್ಯಾಂಕ್ ಖಾತೆ ಕಡ್ಡಾಯಗೊಳಿಸಿರುವುದು ರೈತರಿಗೆ ತೊಂದರೆ ತಂದಿದೆ. ಈ ನಿಯಮಗಳಿಂದ ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಮನಿಲೆಂಡರ್‌ಗಳಿಗೆ ಅನುಕೂಲವಾಗುತ್ತಿದ್ದು, ಬ್ಯಾಂಕುಗಳು ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.

ಹಿಂದೆ ಚಿನ್ನ ಗಿರವಿ ಸಾಲವನ್ನು ಬಡ್ಡಿ ಪಾವತಿಸುವ ಮೂಲಕ ನವೀಕರಿಸಬಹುದಾಗಿತ್ತು. ಆದರೆ ಈಗ ಅಸಲು ಮತ್ತು ಬಡ್ಡಿ ಸಂಪೂರ್ಣ ಪಾವತಿಸಿದ ಬಳಿಕ ಹೊಸ ಸಾಲದಂತೆ ಮರುನವೀಕರಣ ಮಾಡಬೇಕೆಂಬ ನಿಯಮ ರೈತರಿಗೆ ಆರ್ಥಿಕ ಹೊರೆ ತಂದಿದೆ ಎಂದು ಅವರು ಹೇಳಿದ್ದಾರೆ.

ನಿಯಮಗಳನ್ನು ಎರಡು ತಿಂಗಳೊಳಗೆ ಪರಿಷ್ಕರಿಸದಿದ್ದರೆ ರಿಸರ್ವ್ ಬ್ಯಾಂಕ್ ಕಚೇರಿ ಎದುರು ರಾಜ್ಯಮಟ್ಟದ ಚಳುವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಹಣಕಾಸು ಸಂಸ್ಥೆಗಳು ರೈತರಿಗೆ ದೀರ್ಘಾವಧಿ ಸಾಲ ನೀಡುವ ಹೆಸರಿನಲ್ಲಿ ವಂಚನೆ ಮಾಡುತ್ತಿವೆ. ಕೆಲವು ಕಂತು ಪಾವತಿಯಾದ ಬಳಿಕ ಸಾಲ ಅವಧಿಯನ್ನು ಹೆಚ್ಚಿಸಿ ಗ್ರಾಹಕರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ದೂರಿದ್ದಾರೆ.

ಮನೆ ಸಾಲ ಮತ್ತು ಕೃಷಿ ಸಾಲ ತೀರಿಸಲು ವಿಫಲವಾದ ರೈತರ ಮನೆ ಹಾಗೂ ಜಮೀನುಗಳನ್ನು ಜಪ್ತಿ ಮಾಡಿ ಹರಾಜು ಮಾಡುವ ಸರ್ಪೈಸಿ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆಗಳ ವಸೂಲಾತಿ ಕಿರುಕುಳದ ವಿರುದ್ಧ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಹಿರಿಯ ನಾಗರಿಕರ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 10 ರಷ್ಟು ಕಡಿತಗೊಳಿಸಿರುವುದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ರೈತರಿಗೆ ನೀಡುವ ಬೆಳೆ ಸಾಲಗಳನ್ನು ದೀರ್ಘಾವಧಿಯ ಸಾಲಗಳಾಗಿ ಪರಿವರ್ತಿಸಬೇಕು, ರೈತರ ಮಕ್ಕಳಿಗೆ ಶೈಕ್ಷಣಿಕ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪರಿಗಣಿಸಬಾರದು, ಆರೋಗ್ಯ ಮತ್ತು ಕೃಷಿ ವಿಮಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ನೈಜ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಬೇಕು. ಯಾವುದೇ ಸಾಲ ಖಾತೆಗೆ ಹಣ ವರ್ಗಾವಣೆ ಮಾಡಬಾರದು. ಈ ನಿಯಮ ಉಲ್ಲಂಘಿಸುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ರೈತರಿಗೆ ನೀಡುವ ಬೆಳೆ ಸಾಲ ಹಾಗೂ ಚಿನ್ನಾಭರಣ ಸಾಲಗಳ ಮೇಲೆ ಯಾವುದೇ ಸೇವಾ ಶುಲ್ಕ ವಿಧಿಸಬಾರದು. ಜೊತೆಗೆ ಎಲ್ಲಾ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳು ರೈತರಿಗೆ ನೀಡುವ ಸಾಲವನ್ನು “ಫಾರ್ಮರ್ಸ್ ಲೋನ್” ಎಂದು ಪ್ರತ್ಯೇಕವಾಗಿ ಗುರುತಿಸಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande