
ವಿಜಯಪುರ, 06 ಮೇ (ಹಿ.ಸ.) :
ಆಂಕರ್ : ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಮಖಂಡಿಯ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು ಮಾತನಾಡಿ, “ರಾಜ್ಯದಲ್ಲಿ ಹೋರಾಟಕ್ಕೆ ಇನ್ನೊಂದು ಹೆಸರು ಯಡಿಯೂರಪ್ಪ” ಎಂದು ಹೇಳಿದ್ದಾರೆ.
ಇದೇ ಮೇ 9, 2026 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಾರ್ವಜನಿಕ ಅಭಿನಂದನಾ ಸಮಾರಂಭದ ಹಿನ್ನೆಲೆಯಲ್ಲಿ ಅವರು ಮಾತನಾಡಿ, ಯಡಿಯೂರಪ್ಪ ಅವರು ಕಳೆದ 50 ವರ್ಷಗಳ ರಾಜಕೀಯ ಜೀವನದಲ್ಲಿ ತೋರಿದ ತಪಸ್ಸು, ಪರಿಶ್ರಮ ಹಾಗೂ ಹೋರಾಟ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ಹೋರಾಟಗಾರರಾಗಿ ಅವರು ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ್ದು, ಪಕ್ಷವನ್ನು ರಾಜ್ಯದಲ್ಲಿ ಶಕ್ತಿಶಾಲಿ ರಾಜಕೀಯ ಶಕ್ತಿಯಾಗಿ ರೂಪಿಸಲು ಕಾರಣೀಭೂತರಾಗಿದ್ದಾರೆ ಎಂದು ಪ್ರಶಂಸಿಸಿದರು.
ಅಖಂಡ ವಿಜಯಪುರ ಜಿಲ್ಲೆಯ ರಾಜಕೀಯ ಇತಿಹಾಸವನ್ನು ಸ್ಮರಿಸಿದ ಅವರು, ಜನಸಂಘದ ಕಾಲದಿಂದಲೂ ಹೋರಾಟ ಮಾಡುತ್ತಿದ್ದ ಹಿರಿಯ ನಾಯಕರ ಪಾತ್ರವನ್ನು ಉಲ್ಲೇಖಿಸಿದರು. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಸನಗೌಡ ಪಾಟೀಲ, ಪಿ.ಹೆಚ್. ಪೂಜಾರ, ಭಾಂಡಗೆ, ಸಿದ್ಧಲಿಂಗ ಹಂಜಗಿ, ಎಂ.ಎಸ್. ಮಠ, ಡಾ. ದೇಶಪಾಂಡೆ, ಟಂಕಸಾಲಿ ಬಂಧುಗಳು ಸೇರಿದಂತೆ ಹಲವರು ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದನ್ನು ನೆನಪಿಸಿದರು.
ಯಡಿಯೂರಪ್ಪ ಹಾಗೂ ಅಖಂಡ ವಿಜಯಪುರ ಜಿಲ್ಲೆಯ ನಡುವೆ ಅವಿನಾಭಾವ ಸಂಬಂಧವಿದ್ದು, ಅವರು ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಹಳ್ಳಿ ಹಳ್ಳಿಗೆ ಭೇಟಿ ನೀಡಿ ರೈತರನ್ನು ಸಂಘಟಿಸಿದದ್ದು ಮರೆಯಲಾಗದ ಸಂಗತಿ ಎಂದು ಹೇಳಿದರು. ರೈತರ ಸಾಲಮನ್ನಾ ಬೇಡಿಕೆಗಾಗಿ ಬಾಗೇವಾಡಿ, ಬನವಾಸಿ ಹಾಗೂ ಬೀದರ ಪ್ರದೇಶಗಳಿಂದ ಅವರು ಕೈಗೊಂಡ ರೈತಯಾತ್ರೆಗಳನ್ನು ಅವರು ಸ್ಮರಿಸಿದರು.
ತಮ್ಮ ರಾಜಕೀಯ ಜೀವನದ ಅನುಭವವನ್ನು ಹಂಚಿಕೊಂಡ ಕುಲಕರ್ಣಿ, “ನನ್ನ ರಾಜಕೀಯ ಬದುಕಿಗೆ ಯಡಿಯೂರಪ್ಪ ಹಾಗೂ ಅನಂತಕುಮಾರ್ ಇಬ್ಬರೂ ಗುರುಗಳಂತಿದ್ದಾರೆ. 1987ರಲ್ಲಿ ನಾನು ಚುನಾವಣೆಯಲ್ಲಿ ಸೋತಾಗ ಯಡಿಯೂರಪ್ಪ ಅವರು ನನ್ನನ್ನು ಭೇಟಿ ಮಾಡಿ ಹುರಿದುಂಬಿಸಿ, ಮುಂದಿನ ಹಂತಕ್ಕೆ ಕರೆದುಕೊಂಡು ಹೋದರು. ನನ್ನನ್ನು ಶಾಸಕರನ್ನಾಗಿ ಬೆಳೆಸಿದವರು ಅವರೇ” ಎಂದು ಹೇಳಿದರು.
2008ರ ಚುನಾವಣೆಯಲ್ಲಿ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಸಾಧಿಸಿದ ಭರ್ಜರಿ ಗೆಲುವಿಗೆ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ಸಂಘಟನೆ ಶಕ್ತಿ ಕಾರಣವೆಂದು ಅವರು ಹೇಳಿದರು. ರೈತರಿಗಾಗಿ ವಿಶೇಷ ಬಜೆಟ್ ಮಂಡನೆ, ಬಡವರ ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದು ಅವರ ಸಾಧನೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ರಾವೂರ, ಮಲ್ಲು ಕಲಾದಗಿ, ವಿಜಯ ಜೋಶಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು
ಹಿಂದೂಸ್ತಾನ್ ಸಮಾಚಾರ್ / jyothi deshpande