ಮಹಿಳಾ ವಿಶ್ವವಿದ್ಯಾಲಯದ ಸಾಧನೆ ಶ್ಲಾಘನೀಯ : ಪ್ರೊ. ಮೀನಾ ಚಂದಾವರಕರ
ವಿಜಯಪುರ, 06 ಮೇ (ಹಿ.ಸ.) : ಆಂಕರ್ : ಕಳೆದ ಕೆಲ ವರ್ಷಗಳಲ್ಲಿ ವಿಜಯಪುರ ಜಿಲ್ಲೆಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಮಹತ್ತರ ಸಾಧನೆ ಮಾಡಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಮಾಜಿ ಕುಲಪತಿ ಹಾಗೂ ಟ್ರಿಪಲ್ ಎ ಉನ್ನತ ಮಟ್ಟದ ತಜ್ಞರ ತಂಡದ ಮುಖ್ಯಸ್ಥೆ ಪ್ರೊ. ಮೀನಾ ಚಂದಾವರಕರ ಪ
Bibi


ವಿಜಯಪುರ, 06 ಮೇ (ಹಿ.ಸ.) :

ಆಂಕರ್ : ಕಳೆದ ಕೆಲ ವರ್ಷಗಳಲ್ಲಿ ವಿಜಯಪುರ ಜಿಲ್ಲೆಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಮಹತ್ತರ ಸಾಧನೆ ಮಾಡಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಮಾಜಿ ಕುಲಪತಿ ಹಾಗೂ ಟ್ರಿಪಲ್ ಎ ಉನ್ನತ ಮಟ್ಟದ ತಜ್ಞರ ತಂಡದ ಮುಖ್ಯಸ್ಥೆ ಪ್ರೊ. ಮೀನಾ ಚಂದಾವರಕರ ಪ್ರಶಂಸೆ ವ್ಯಕ್ತಪಡಿಸಿದರು.

ನಗರದ ಮಹಿಳಾ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಕಳೆದ ಎರಡು ದಿನಗಳಿಂದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಪರಿಶೀಲನೆ ನಡೆಸಿದ ನಂತರ ನಡೆದ ಎಎಎ ಸಮಿತಿಯ ನಿರ್ಗಮನ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯವು ಭೌತಿಕ, ಶೈಕ್ಷಣಿಕ ಹಾಗೂ ಮೂಲಸೌಕರ್ಯಗಳ ದೃಷ್ಟಿಯಿಂದ ಗಮನಾರ್ಹ ಪ್ರಗತಿ ಸಾಧಿಸಿರುವುದು ಸಂತಸದ ವಿಚಾರ ಎಂದರು. ಹಲವು ಸವಾಲುಗಳ ನಡುವೆಯೂ ಸಾಧನೆ ಮಾಡಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.

ಆದರೆ, ಇನ್ನೂ ಕೆಲವು ಪ್ರಮುಖ ಸವಾಲುಗಳಿವೆ ಎಂದು ಅವರು ಉಲ್ಲೇಖಿಸಿದರು. ವಿಶೇಷವಾಗಿ ಖಾಯಂ ಬೋಧಕರ ಹುದ್ದೆಗಳು ಖಾಲಿಯಾಗಿರುವುದು ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಅತಿಥಿ ಉಪನ್ಯಾಸಕರ ಮೇಲೆ ಹೆಚ್ಚಿನ ಹೊರೆ ಇರುವುದರಿಂದ ಶೀಘ್ರದಲ್ಲೇ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಇದಲ್ಲದೆ, ಕೆಲವು ವಿಭಾಗಗಳಲ್ಲಿ ವಿದ್ಯಾರ್ಥಿನಿಯರ ಪ್ರವೇಶ ಪ್ರಮಾಣ ಕಡಿಮೆ ಇರುವುದರಿಂದ ಪ್ರವೇಶವನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮುಖ್ಯ ಆವರಣದಲ್ಲಿ ಪ್ರಾರಂಭಿಸಿರುವ ಸ್ನಾತಕ ಪದವಿ ಕೋರ್ಸ್ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಅವರು ಸೂಚಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾತನಾಡಿ, ಟ್ರಿಪಲ್ ಎ ತಂಡದ ಭೇಟಿಯು ವಿಶ್ವವಿದ್ಯಾಲಯಕ್ಕೆ ಸ್ಪೂರ್ತಿದಾಯಕವಾಗಿದ್ದು, ಸಾಧನೆಗಳನ್ನು ಪ್ರದರ್ಶಿಸಲು ಹಾಗೂ ಮುಂದಿನ ಯೋಜನೆಗಳನ್ನು ರೂಪಿಸಲು ಇದು ಸಹಕಾರಿಯಾಗಿದೆ ಎಂದರು. ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಸೇವೆಗಳ ಮೂಲಕ ಮಹಿಳೆಯರ ಸಬಲೀಕರಣವೇ ವಿಶ್ವವಿದ್ಯಾಲಯದ ಮುಖ್ಯ ಧ್ಯೇಯವಾಗಿದ್ದು, ಶಿಕ್ಷಣವು ಸಮಾಜ ಪರಿವರ್ತನೆಯ ಶಕ್ತಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.

ಟ್ರಿಪಲ್ ಎ ತಂಡದ ಶಿಫಾರಸುಗಳು ವಿಶ್ವವಿದ್ಯಾಲಯದ ಮುಂದಿನ ಅಭಿವೃದ್ಧಿಗೆ ಮಾರ್ಗದರ್ಶಕವಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಗಮನ ಸಭೆಯಲ್ಲಿ ಎಎಎ ಸಮಿತಿಯ ಸದಸ್ಯರಾದ ಪ್ರೊ. ಎನ್.ಬಿ. ನಡವಿನಮನಿ, ಪ್ರೊ. ಬಿ.ಎಚ್. ನಾಗೂರ, ಪ್ರೊ. ಬಸವರಾಜ ಡೋಣೂರು ಸೇರಿದಂತೆ ಹಲವರು ಭಾಗವಹಿಸಿದ್ದರು. ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕಣ್ಣವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ಐಕ್ಯುಎಸಿ ನಿರ್ದೇಶಕಿ ಪ್ರೊ. ಶಾಂತಾದೇವಿ, ಡೀನರುಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande