
ಬೆಂಗಳೂರು, 06 ಮೇ (ಹಿ.ಸ.) :
ಆ್ಯಂಕರ್ : ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ ವಿವಾದ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಕಾಂಗ್ರೆಸ್ ನ ಬ್ಯಾಲೆಟ್ ಪೇಪರ್ ಆಧಾರಿತ ಚುನಾವಣೆಯ ಅಗತ್ಯತೆಯನ್ನು ಈ ಘಟನೆ ಸ್ಪಷ್ಟಪಡಿಸಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಅವರು, ನ್ಯಾಯಾಲಯದ ಮಧ್ಯಪ್ರವೇಶದಿಂದ ಮರು ಎಣಿಕೆ ನಡೆಯದಿದ್ದರೆ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ನ್ಯಾಯ ದೊರಕುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಮರು ಎಣಿಕೆಯ ಬಳಿಕ ಜೀವರಾಜ್ ಅಧಿಕೃತವಾಗಿ ಆಯ್ಕೆಯಾಗಿದ್ದು, ಶಾಸಕರಾಗಿ ಪ್ರಮಾಣಪತ್ರ ಪಡೆದಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಇದಕ್ಕೂ ಮೊದಲು ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ರಾಜೇಗೌಡ ಆಯ್ಕೆಯಾಗಿದ್ದರು ಎಂಬುದು ವಿವಾದಕ್ಕೆ ಕಾರಣವಾಗಿದೆ. ಅಂಚೆ ಬ್ಯಾಲೆಟ್ ಮತಗಳ ಎಣಿಕೆಯಲ್ಲಿ ಲೋಪ ಮತ್ತು ಅಕ್ರಮ ನಡೆದಿದೆ ಎಂಬ ಆರೋಪವನ್ನು ಬಿಜೆಪಿ ಮುಂದಿಟ್ಟಿದೆ.
ವಿಜಯೇಂದ್ರ ಅವರು, “ಜನಾದೇಶಕ್ಕೆ ವಿರುದ್ಧವಾಗಿ ಮೂರು ವರ್ಷಗಳ ಕಾಲ ಶಾಸಕತ್ವದಿಂದ ವಂಚಿತವಾಗಿರುವುದು ಪ್ರಜಾಪ್ರಭುತ್ವದ ದುರಂತ” ಎಂದು ಟೀಕಿಸಿದ್ದಾರೆ. ಅಕ್ರಮವಾಗಿ ಅಧಿಕಾರ ಅನುಭವಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧವೂ ಅವರು ವಾಗ್ದಾಳಿ ನಡೆಸಿ, ಮರು ಎಣಿಕೆ ಕುರಿತು ಮೊದಲು ಆಕ್ಷೇಪ ಏಕೆ ವ್ಯಕ್ತಪಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದಲ್ಲದೆ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ರಾಜಕೀಯ ಒತ್ತಡಕ್ಕೆ ಮಣಿಯದೇ ತಕ್ಷಣ ಜೀವರಾಜ್ ಅವರಿಗೆ ಪ್ರಮಾಣ ವಚನ ಬೋಧಿಸಬೇಕು ಎಂದು ಒತ್ತಾಯಿಸಿದ್ದಾರೆ. ವಿಳಂಬ ಮಾಡಿದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa