
ಕೋಲಾರ, ಮೇ ೦೬ (ಹಿ.ಸ) :
ಆ್ಯಂಕರ್ : ಗ್ರಾಮೀಣ ಭಾಗದಲ್ಲಿ ಬೇಸಿಗೆ ಶಿಬಿರಗಳ ಆಯೋಜನೆ ಬಹಳ ವಿರಳವಾಗಿದ್ದು, ಇಂತಹ ಶಿಬಿರಗಳು ಹೆಚ್ಚು ನಡೆಯುವ ಅಗತ್ಯವಿದೆ. ಗ್ರಾಮೀಣ ಭಾಗದ ಮಕ್ಕಳು ತಮ್ಮ ರಜೆಯ ಸಮಯವನ್ನು ವ್ಯರ್ಥ ಮಾಡದೆ ಸಂಗೀತ ಅಭ್ಯಾಸ ಮತ್ತು ನಾಟಕ ತರಬೇತಿಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ಸಮಾಜ ಸೇವಕ ಬೆಗ್ಲಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಕೋಲಾರ ತಾಲ್ಲೂಕಿನ ಅಮ್ಮೇರಹಳ್ಳಿಯಲ್ಲಿ 'ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ' ಹಾಗೂ 'ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯ ಬೆಂಗಳೂರು ಸಹಯೋಗದೊಂದಿಗೆ, ವಿಶೇಷ ಘಟಕ ಯೋಜನೆಯಡಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಾನಪದ ಸಂಗೀತವು ನಮ್ಮ ಮಣ್ಣಿನ ಸಂಸ್ಕೃತಿಯ ಪ್ರತೀಕವಾಗಿದೆ. ಅಳಿವಿನಂಚಿನಲ್ಲಿರುವ ಇಂತಹ ಕಲೆಗಳನ್ನು ಉಳಿಸಿ ಬೆಳೆಸಲು ಬೇಸಿಗೆ ಶಿಬಿರಗಳು ಸೂಕ್ತ ವೇದಿಕೆಯಾಗುತ್ತವೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸುವುದರಿಂದ ಅವರ ಭವಿಷ್ಯಕ್ಕೆ ಉತ್ತಮ ಅಡಿಪಾಯ ಸಿಗುತ್ತದೆ ಎಂದು ತಿಳಿಸಿದರು.
ಶಿಬಿರದ ಪ್ರಮುಖ ಆಕರ್ಷಣೆಯಾಗಿ ತಬಲ ರಮಣ ನಡೆಸಿಕೊಟ್ಟ ಮ್ಯಾಜಿಕ್ ಶೋ ಮಕ್ಕಳನ್ನು ಮಂತ್ರಮುಗ್ಧರನ್ನಾಗಿಸಿತು. ಕೇವಲ ಮನರಂಜನೆ ನೀಡದೆ, ತಬಲ ನುಡಿಸುವಿಕೆ ಮತ್ತು ಶೃತಿಗೆ ತಕ್ಕಂತೆ ಲಯಬದ್ಧವಾಗಿ ಹಾಡುವ ಕಲೆ ಹಾಗೂ ತಾಂತ್ರಿಕ ಸೂಕ್ಷ್ಮಗಳನ್ನು ಅವರು ಶಿಬಿರಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಪ್ರಾಧ್ಯಾಪಕಿ ವೆಂಕಟಲಕ್ಷ್ಮಮ್ಮ ಅವರು ಮಕ್ಕಳಿಗೆ ನಮ್ಮ ಸಂಪ್ರದಾಯದ ಕೋಲಾಟ ನೃತ್ಯದ ತರಬೇತಿ ನೀಡಿದರೆ, ಅರಾಭಿಕೊತ್ತನೂರು ಪ್ರಜ್ವಲ್ ಮತ್ತು ವೇಣು ಅವರು ಕಂಜರ ಹಾಗೂ ಡೋಲಕ್ ನುಡಿಸುವ ಕಲೆಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದರು.
ಕಾರ್ಯಕ್ರಮದಲ್ಲಿ ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವೆಂಕಟಾಚಲಪತಿ ಬಿ., ಸದಸ್ಯರಾದ ಸಿ.ಜಿ. ಗಜೇಂದ್ರ, ನಾರಾಯಣಸ್ವಾಮಿ, ಜಾನಪದ ಗಾಯಕ ಕುಡುವನಹಳ್ಳಿ ಗಣೇಶಪ್ಪ ಮತ್ತು ಮಾರ್ಜೇನಹಳ್ಳಿ ವೀರಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್