
ಬಾಗಲಕೋಟೆ, 06 ಮೇ (ಹಿ.ಸ.) :
ಆಂಕರ್ : ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ (SIR) ರಾಜ್ಯ ಸಂಚಾಲಕರಾಗಿದ್ದು, ಕರ್ನಾಟಕ ಬಿಜೆಪಿ ರಾಜ್ಯ ಮಾಜಿ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯರಾಗಿದ್ದ ಜಗದೀಶ್ ಹಿರೇಮನಿ ಅವರ ಅಕಾಲಿಕ ನಿಧನದ ಸುದ್ದಿ ಬಾಗಲಕೋಟೆ ಜಿಲ್ಲೆಯಲ್ಲೇ ಶೋಕದ ವಾತಾವರಣವನ್ನುಂಟು ಮಾಡಿದೆ.
ಸಫಾಯಿ ಕರ್ಮಚಾರಿಗಳ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದ ಹಿರೇಮನಿ ಅವರು, ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದ್ದರು. ವಿದ್ಯಾರ್ಥಿ ಪರಿಷತ್ ಹಾಗೂ ಸಂಘ ಪರಿವಾರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಅವರು, ಹಲವಾರು ಸಾಮಾಜಿಕ ಹೋರಾಟಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದರು.
ಅವರ ನಿಧನಕ್ಕೆ ವಿವಿಧ ರಾಜಕೀಯ ಹಾಗೂ ಸಾಮಾಜಿಕ ವಲಯದ ಮುಖಂಡರು ಸಂತಾಪ ಸೂಚಿಸಿದ್ದು, ಸಮಾಜಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ಅವರ ನಿಷ್ಠೆ, ಪರಿಶ್ರಮ ಹಾಗೂ ಸಾಮಾಜಿಕ ಕಾಳಜಿ ಸದಾ ಸ್ಮರಣೀಯವಾಗಿರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿರೇಮನಿ ಅವರ ಅಗಲಿಕೆಯಿಂದ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಸಹೋದ್ಯೋಗಿಗಳಲ್ಲಿ ದುಃಖದ ಮಳೆ ಸುರಿದಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಲಾಗಿದೆ.
ಜಗದೀಶ್ ಹಿರೇಮನಿ ಅವರ ನಿಧನವು ಸಾಮಾಜಿಕ ಹೋರಾಟಗಾರರ ವಲಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande